ಪ್ರಾಕ್ತನ ಕಾಲದಿಂದಲೂ ಕರ್ನಾಟಕ ಕರಾವಳಿಯ ಪ್ರಮುಖ ನಗರಗಳು ಬಂದರು ಪ್ರದೇಶಗಳಾಗಿದ್ದವು. ಮಂಗಳಾಪುರ, ಉದಯಪುರ, ಬಾರಕಾಪುರ ಇವೆಲ್ಲವೂ ದೇಶ ಮತ್ತು ವಿದೇಶಗಳ ಜೊತೆ ನಾವಿಕ ಸಂಬಂಧ ಹೊಂದಿದ್ದ ಸುಪ್ರಸಿದ್ದ ಬಂದರು ನಗರಗಳು.
ಆಧುನಿಕ ಉಡುಪಿಯ ಮಲ್ಪೆ ಅತ್ಯಂತ ಪ್ರಮುಖ ಪ್ರದೇಶವಾಗಿದ್ದು, ಇಲ್ಲಿಗೆ ಸಮೀಪದಲ್ಲಿರುವ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚ್ ಬಹು ಪ್ರಸಿದ್ದವಾಗಿದೆ. ಬಂದರು ನಗರಕ್ಕೆ ಸರಿಹೊಂದುವಂತೆ ದೋಣಿಯಾಕಾರದಲ್ಲಿರುವ, ಪಕ್ಕದಲ್ಲೇ ಲೈಟ್ ಹೌಸ್ ರಚನೆಯಂತಹ ಕಟ್ಟಡವೂ ಇರುವ ಶುದ್ದ ಬಿಳಿ ಬಣ್ಣದ ಅತ್ಯಂತ ವಿನೂತನ ಮಾದರಿಯ ಚರ್ಚ್ ಎನಿಸಿಕೊಂಡು ಹಲವಾರು ಭಕ್ತರನ್ನು ನಿತ್ಯವೂ ಆಕರ್ಷಿಸುತ್ತಿದೆ.
ಸ್ಟೆಲ್ಲಾ ಮಾರಿಸ್ ಎಂದರೆ ‘ಸಮುದ್ರದ ನಕ್ಷತ್ರ’ ಎಂದು ಅರ್ಥ. ಬಂದರು ನಗರವಾದ ಮಲ್ಪೆಯಲ್ಲಿ ದೋಣಿಯಾಕಾರದಲ್ಲಿರುವ ಚರ್ಚಿಗೆ ಈ ಹೆಸರು ಸುಂದರವಾಗಿ ಸರಿಹೊಂದುತ್ತದೆ. ಈ ಸಮುದ್ರದ ನಕ್ಷತ್ರವು ಸಮುದ್ರ ಪ್ರಯಾಣ ಮಾಡುವ ನಾವಿಕರಿಗೆ ಅವರ ಪ್ರಯಾಣದ ಸಮಯದಲ್ಲಿ ಮಾರ್ಗದರ್ಶನ ನೀಡುವುದರ ಜೊತೆಗೆ ಅವರಲ್ಲಿ ಭರವಸೆ ಮತ್ತು ಆಕಾಂಕ್ಷೆಗಳನ್ನು ಪುನಃಸ್ಥಾಪಿಸುತ್ತದೆ. ನಾವಿಕರು ತಮ್ಮ ಪ್ರಯಾಣದಲ್ಲಿ ದಿಕ್ಕುತಪ್ಪಂದತೆ ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಈ ನಕ್ಷತ್ರವು ಅವರನ್ನು ಮುನ್ನಡೆಸುತ್ತದೆ.
ಚರ್ಚಿನ ಇತಿಹಾಸ:
ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚ್ನ ಸಂಸ್ಥಾಪಕರಾದ ವಂದನೀಯ ಫಾದರ್ ಚಾರ್ಲ್ಸ್ ಡಿಸೋಜ ಅವರು ಕಲ್ಮಾಡಿಯ ನಿವಾಸಿಯಾಗಿದ್ದರು. ಇವರು ಭಾರತೀಯ ನೌಕಾಪಡೆಯಲ್ಲಿ ಕಮಾಂಡರ್ ಆಗಿದ್ದರು ಕೂಡಾ, ಚಿಕ್ಕಂದಿನಿಂದಲೂ ಸೇವೆಯೆಡೆಗೆ ಒಲವಿದ್ದಿದ್ದರಿಂದ ಪಾದ್ರಿಯಾಗುವ ನಿರ್ಧಾರ ಕೈಗೊಳ್ಳುತ್ತಾರೆ. ತನ್ನ ವೃತ್ತಿಯನ್ನು ತೊರೆದು ರೋಮ್ ಗೆ ಹೋಗಿ ಅಲ್ಲಿ ಪಾದ್ರಿಯಾಗಲು ಬೇಕಾದ ಎಲ್ಲಾ ವಿದ್ಯೆಗಳನ್ನು ಸಂಪಾದಿಸಿ ಮರಳಿ ತಾಯ್ನಾಡಿಗೆ ಬಂದು ತನ್ನ ಸ್ವಂತ ಹಣದಿಂದಲೇ ಜಮೀನು ಖರೀದಿಸಿ, ತನ್ನ ತಾಯಿಯ ಹೆಸರಿನಲ್ಲಿ ಅದನ್ನು ದಾನ ಮಾಡಿ, ಅಲ್ಲೇ ಚರ್ಚಿನ ನಿರ್ಮಾಣ ಮಾಡಿ ಮುಂದೆ ಜನರ ಸಹಯೋಗದೊಂದಿಗೆ ಚರ್ಚನ್ನು ಅಭಿವೃದ್ದಿ ಪಡಿಸುತ್ತಾ ಹೋಗುತ್ತಾರೆ.
1972 ರಲ್ಲಿ ಕಲ್ಮಾಡಿ ಎನ್ನುವ ಪುಟ್ಟ ಊರಿನ ಕ್ರೈಸ್ತ ಭಕ್ತರಿಗೆ ಅವರದ್ದೇ ಆದ ಒಂದು ಚರ್ಚ್ ನಿರ್ಮಾಣವಾಗುತ್ತದೆ. 1988 ರ ಆಗಸ್ಟ್ 15 ರಂದು ಫಾ. ವಿಲ್ಸನ್ ಡಿಸೋಜಾ ಅವರು ಕೊಡುಗೆಯಾಗಿ ನೀಡಿದ ಅವರ್ ಲೇಡಿ ಆಫ್ ವೆಲಂಕಣಿ ಪ್ರತಿಮೆಯನ್ನು ಕಲ್ಮಾಡಿ ಚರ್ಚ್ನಲ್ಲಿ ಸ್ಥಾಪಿಸಲು ವೆಲಂಕಣಿಯಿಂದ ತರಲಾಗುತ್ತದೆ. ಆಗಸ್ಟ್ 15, 1988 ರಂದು ಮದರ್ ಆಫ್ ಸಾರೋಸ್ ಚರ್ಚ್ ಉಡುಪಿಯಲ್ಲಿ ಆಶೀರ್ವದಿಸಲ್ಪಟ್ಟ ಪ್ರತಿಮೆಯನ್ನು ಭವ್ಯವಾದ ಮೆರವಣಿಗೆಯಲ್ಲಿ ಕಲ್ಮಾಡಿಗೆ ತಂದು ಬಿಷಪ್ ಬಾಸಿಲ್ ಡಿಸೋಜ ಅವರಿಂದ ಸ್ಥಾಪಿಸಲ್ಪಡುತ್ತದೆ. ಅಂದಿನಿಂದ ಇಂದಿನವರೆಗೆ ಹಲವರ ಶ್ರಮದ ಫಲವಾಗಿ ಚರ್ಚ್ ಅಭಿವೃದ್ದಿ ಹೊಂದುತ್ತದೆ. 2012 ನೇ ಇಸವಿಯಲ್ಲಿ ಫಾ.ಅಲ್ಬನ್ ಡಿಸೋಜಾ ಮುತುವರ್ಜಿಯಿಂದ ಈಗಿನ ದೋಣಿಯಾಕಾರದ ಚರ್ಚಿನ ನಿರ್ಮಾಣವಾಗುತ್ತದೆ ಮತ್ತು ಕಲ್ಮಾಡಿಯ ಚರ್ಚ್ ದೇಶ ವಿದೇಶದ ಭಕ್ತರ ಆಕರ್ಷಣೆಯ ಕೇಂದ್ರವಾಗುತ್ತದೆ.
ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಘೋಷಣೆ
ಇದೀಗ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ 50 ನೇ ವಾರ್ಷಿಕೋತ್ಸವದ ಅಂಗವಾಗಿ ಚರ್ಚನ್ನು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಘೋಷಣೆ ಮಾಡಲಾಗಿದೆ. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೋ ಅಧಿಕೃತ ಘೋಷಣೆ ಮಾಡಿದ್ದಾರೆ. ಚರ್ಚಿನ ಸುವರ್ಣಮಹೋತ್ಸವದ ಈ ಸಂಭ್ರಮದ ಸಂದರ್ಭದಲ್ಲಿ ಈ ಘೋಷಣೆಯನ್ನು ಮಾಡಲಾಗುತ್ತಿದ್ದು, ಭಕ್ತರೆಲ್ಲರೂ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ನೋವು, ದುಃಖ ದುಮ್ಮಾನಗಳನ್ನು ಕಳೆದು, ತಮಗೆ ಸಂತೋಷ ನೆಮ್ಮದಿಯನ್ನು ನೀಡುವ ವೆಲಂಕಣಿ ಮಾತೆಯ ಮಡಿಲಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪುನೀತರಾಗುತ್ತಿದ್ದಾರೆ.
-ಉಡುಪಿ ಎಕ್ಸ್ ಪ್ರೆಸ್