ಕಾರ್ಕಳ: ಒಂದು ದೇಶ ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ಮುಂದುವರಿಯಲು ಅತ್ಯುತ್ತಮವಾದ ಗ್ರಂಥಾಲಯಗಳು ಅವಶ್ಯ. ನಮ್ಮ ದೇಶದಲ್ಲಿ ಗ್ರಂಥಾಲಯಗಳು ಬೆಳೆಯಲು, ಮಾಹಿತಿ ವಿಜ್ಞಾನ ಮುಂದುವರಿಯಲು ಪದ್ಮಶ್ರೀ ಡಾ. ಎಸ್. ಆರ್. ರಂಗನಾಥರ ಅಪಾರ ಜ್ಞಾನ, ದೂರದೃಷ್ಟಿ, ಸಂಶೋಧನೆಗಳು ಕಾರಣವಾಗಿವೆ ಎಂದು ಎಂ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ. ಕಿರಣ್ ಎಂ. ಅವರು, ಕಾಲೇಜಿನ ಐ.ಕ್ಯು.ಎ.ಸಿ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಭಾರತದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಪಿತಾಮಹ ಡಾ. ಎಸ್.ಆರ್ ರಂಗನಾಥನ್ ರವರ 130 ನೇ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ವಾಚಕರ ವೇದಿಕೆಯನ್ನು ಉದ್ಘಾಟಿಸಿ, ಓದು ಒಂದು ಹವ್ಯಾಸವಾಗಬೇಕು, ಪುಸ್ತಕಗಳು ನಮ್ಮ ನಿಜವಾದ ಮಿತ್ರರು. ನಿರಂತರ ಓದಿನಿಂದ ವಿದ್ಯಾರ್ಥಿಗಳು ತಮ್ಮ ಜ್ಞಾನಾರ್ಜನೆಯನ್ನು ಪಡೆದು, ವ್ಯಕ್ತಿತ್ವವನ್ನು ಉತ್ತಮಪಡಿಸಬೇಕು ಎಂದರು.
ಕಾರ್ಯಕಮದ ಸಂಯೋಜಕರಾದ ಆಯ್ಕೆ ಶ್ರೇಣಿ ಗ್ರಂಥಪಾಲಕ ವೆಂಕಟೇಶ್ ಮಾತನಾಡಿ, ಡಾ. ಎಸ್ ಆರ್ ರಂಗನಾಥನ್ ಅವರ ಜೀವನ, ಬರಹಗಳು, ಆದರ್ಶ ಮತ್ತು ಸಂಶೋಧನೆಗಳ ಮೇಲೆ ಬೆಳಕನ್ನು ಚೆಲ್ಲಿ, ಇಡೀ ಭಾರತ ದೇಶ ಮಾತ್ರವಲ್ಲದೇ ಜಗತ್ತಿಗೇ ಮಾದರಿಯಾಗುವಂತಹ ಸೇವೆಯನ್ನು ನೀಡಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರಕ್ಕೆ ಅವರು ನೀಡಿರುವ ಅಪಾರ ಕೊಡುಗೆಯನ್ನು ಸ್ಮರಿಸಿದರು.
ವಾಣಿಜ್ಯ ವಿಭಾಗ ಮುಖ್ಯಸ್ಥೆ ಸುಶ್ಮಾ ರಾವ್ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದು, ಓದುಗರ ವೇದಿಕೆಯ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು.
ಉಪನ್ಯಾಸಕರಾದ ಡಾ.ಗಣೇಶ, ನವೀನ, ಯೋಗೇಶ್ ಡಿ.ಹೆಚ್, ಜ್ಯೋತಿ ಶೆಟ್ಟಿ, ಭಾಗ್ಯಲಕ್ಷ್ಮೀ, ಡಾ. ಸುಬ್ರಹ್ಮಣ್ಯ, ರಾಮಮೂರ್ತಿ, ಡಾ. ದಿವ್ಯಾ ಪ್ರಭು, ಡಾ. ಸುನಿತಾ ಎಲ್ ಪೆರೆರಾ, ಸಂಧ್ಯಾ ಭಂಡಾರಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕಾವ್ಯ ಮತ್ತು ನಿವೇದಿತಾ ಶೆಟ್ಟಿ ಪ್ರಾರ್ಥಿಸಿದರು. ಪ್ರಜ್ವಲ್ ಪಿಂಟೋ ಹಾಗೂ ತಂಡದವರು ಭಾವಗೀತೆಗಳನ್ನು ಹಾಡಿದರು. ವಿದ್ಯಾರ್ಥಿನಿಯರಾದ ಫಲ್ಗುಣಿ ವಂದಿಸಿದರು, ಸುಚಿತ್ರಾ ನಿರೂಪಿಸಿದರು.