ನವದೆಹಲಿ: 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರಿಗೆ ಕೋರ್ಬೆವಾಕ್ಸ್ ನೊಂದಿಗೆ ಮುನ್ನೆಚ್ಚರಿಕಾ(ಬೂಸ್ಟರ್) ಡೋಸ್ ನ ಭಿನ್ನ ಆಯ್ಕೆಯು ಲಭ್ಯವಿರುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾತನಾಡಿ, 18 ವರ್ಷ ಮೇಲ್ಪಟ್ಟ ಜನರಿಗೆ ಕೋವಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆಗಳ ಎರಡನೇ ಡೋಸ್ ನೀಡಿದ ದಿನಾಂಕದಿಂದ ಆರು ತಿಂಗಳ ನಂತರ ಮುನ್ನೆಚ್ಚರಿಕಾ ಡೋಸ್ ಆಗಿ ಕೋರ್ಬೆವಾಕ್ಸ್ ಲಭ್ಯವಿರುತ್ತದೆ ಎಂದು ಹೇಳಿದ್ದಾರೆ.
ಅಂದರೆ, ಈ ಹಿಂದೆ ಕೋವಾಕ್ಸಿನ್ ಅಥವಾ ಕೋವಿಶೀಲ್ಡ್ ನ ಎರಡೂ ಡೋಸೇಜ್ ಗಳನ್ನು ತೆಗೆದುಕೊಂಡವರು ಬೂಸ್ಟರ್ ಡೋಸ್ ತೆಗೆದುಕೊಳ್ಳುವಾಗ ಕೋರ್ಬೆವ್ಯಾಕ್ಸ್ ಅನ್ನು ಪರಿಗಣಿಸಬಹುದು. ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡು ಡೋಸ್ ಗಳನ್ನು ತೆಗೆದುಕೊಂಡಿದ್ದು, ಆರು ತಿಂಗಳುಗಳನ್ನು ಮೀರಿದ್ದರೆ ಅಂತಹವರು ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿರುತ್ತಾರೆ ಮತ್ತು ಅವರು ಕೋವಾಕ್ಸಿನ್, ಕೋವಿಶೀಲ್ಡ್ ಅಥವಾ ಕೋರ್ಬೆವಾಕ್ಸ್ ಈ ಮೂರರಲ್ಲಿ ಯಾವುದೇ ಒಂದು ಲಸಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಭಿನ್ನ ಆಯ್ಕೆಯ ಬೂಸ್ಟರ್ ಡೋಸೇಜ್ ಗಳಿಗೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ ಹಾಗೂ ಈ ಸಂಬಂಧ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆಯಲಾಗಿದೆ. ಭಿನ್ನ ಆಯ್ಕೆಯ ಬೂಸ್ಟರ್ ಡೋಸ್ ನೀಡುವಿಕೆಗೆ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರಾಜೇಶ್ ಭೂಷಣ್ ತಿಳಿಸಿದ್ದಾರೆ.