ಮಠಗಳ ಸ್ವಾಮೀಜಿಗಳು ತಮ್ಮ ಜೋಳಿಗೆಯಲ್ಲಿ ಭಕ್ತರ ಮನೆಗಳಿಗೆ ಭೇಟಿ ನೀಡಿ, ಭಿಕ್ಷೆ ಬೇಡಿ ಸಂಗ್ರಹಿಸಿ ದೊರೆತ ಧವಸ ಧಾನ್ಯಗಳಿಂದ ಮಠಗಳಲ್ಲಿ ಓದುವ ಬಡ ಮಕ್ಕಳಿಗೆ ಪ್ರಸಾದ ನೀಡುವ ಕಾರ್ಯವನ್ನು ಎಲ್ಲಡೆ ನಡೆದಿದೆ. ಆದರೆ ಸಮಾಜ ಹಾಗೂ ದೇಶವನ್ನು ಹಾಳು ಮಾಡುವ ದುರ್ವ್ಯಸನಗಳು, ದುಶ್ಚಟಗಳು ಹಾಗೂ ದುರಾಚಾರಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು.
ಬಾಗಲಕೋಟೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ 1 ಆಗಸ್ಟ್ 1930 ರಲ್ಲಿ ಜನಿಸಿದ ಡಾ. ಮಹಾಂತ ಶಿವಯೋಗಿಗಳು ತಮ್ಮ 10 ನೇ ವಯಸ್ಸಿಗೆ ಸವದಿಯ ವಿರಕ್ತಮಠದ ಕಿರಿಯ ಸ್ವಾಮೀಜಿಗಳಾದರು, ಕಾಶಿಯಲ್ಲಿ ಸಂಸ್ಕೃತ ,ಹಿಂದಿ,ಯೋಗ , ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಪರಿಣಿತಿ ಸಾಧಿಸಿದರು. ಉತ್ತರ ಕರ್ನಾಟಕದಲ್ಲಿ ಭೀಕರ ಬರಗಾಲ ಬಂದ ಕಾರಣ ಕಾಶಿಯಿಂದ ಆಗಮಿಸಿ, ಗ್ರಾಮಗಳ ಜಮೀನುದಾರರು, ಶ್ರೀಮಂತರನ್ನು ವಿನಂತಿಸಿ ಧವಸ ದಾನ್ಯ ಸಂಗ್ರಹಿಸಿ ಗ್ರಾಮಗಳಲ್ಲಿ ಗಂಜಿ ಕೇಂದ್ರ ಆರಂಭಿಸಿ ದಾಸೋಹ ಮಾಡಿದ್ದು ಮಾತ್ರವಲ್ಲದೇ ಜಾನುವಾರುಗಳಿಗಾಗಿ ಪಶು ಶಾಲೆ ಗೋಶಾಲೆಗಳನ್ನು ಆರಂಭಿಸಿ ಮೇವು ಮತ್ತು ನೀರಿನ ವ್ಯವಸ್ಥೆ ಮಾಡಿದರು.
1970 ರಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ 19 ಪೀಠಾಧಿಕಾರಿಯಾಗಿ ನಂತರ 2018 ರ ವರೆಗೆ ಅಖಂಡ 48 ವರ್ಷಗಳ ಕಾಲ ಅವರ ಸಾಧನೆ ಅಪಾರವಾದುದು. ನಿರಂತರ ಪ್ರಸಾದ ದಾಸೋಹ, ವಚನ ಮಾಂಗಲ್ಯ, ದೇವದಾಸಿ ವಿಮೋಚನಾ ಸಂಸ್ಥೆ,ದೇವದಾಸಿಯರ ಮಕ್ಕಳಿಗೆ ಟ್ರಸ್ಟ್ ಸ್ಥಾಪನೆ, ನಿರುದ್ಯೋಗಿಗಳಿಗೆ ಮತ್ತು ವಿಧವೆಯರಿಗೆ ಕಾಯಕ ಸಂಜೀವಿನಿ ಸಂಸ್ಥೆ ಸ್ಥಾಪನೆ, ನಿಸರ್ಗ ಚಿಕಿತ್ಸೆ-ಯೋಗ ಕೇಂದ್ರ ಸ್ಥಾಪನೆ, ಶಾಖಾ ಮಠಗಳಿಗೆ ಪ.ಜಾತಿ ಮತ್ತು ಪಂಗಡಗಳ ಯುವಕರಿಗೆ ಧರ್ಮ ಸಂಸ್ಕಾರ ನೀಡಿ ಪಟ್ಟಾಭಿಷೇಕ ಮಾಡಿದ್ದು, ಮಹಿಳಾ ಸಾಧಕಿಯರಿಗೆ ಜಂಗಮ ದೀಕ್ಷೆ ನೀಡಿ ಮಠಾಧಿಕಾರಿಯನ್ನಾಗಿ ಮಾಡಿದ್ದು , ಮಠದ ನೂರಾರು ಎಕರೆ ಭೂಮಿಯನ್ನು ಆಯಾ ಗ್ರಾಮಗಳ ರೈತರಿಗೆ ಕೃಷಿ ಮಾಡಿ ಬದುಕಲು ನೀಡಿದ್ದು ಮುಂತಾದ ಹಲವು ಸಾಧನೆಗಳನ್ನು ಮಾಡಿದರು.
ಇವುಗಳ ಜೊತೆಗೆ ಸ್ವಾಮೀಜಿಯವರು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ 1975 ರಿಂದ ಕೈಗೊಂಡ ಮಹಾಂತ ಜೋಳಿಗೆ ಕಾರ್ಯಕ್ರಮ ಅತ್ಯಂತ ವಿಶಿಷ್ಠವಾದುದು. ಕುಡಿತದ ಚಟದಿಂದ ಪ.ಜಾತಿಯ ಯುವಕನೊಬ್ಬ ನಿಧನದ ಸುದ್ದಿ ಕೇಳಿ ಅವನ ಕೇರಿಗೆ ಸಾಂತ್ವನ ಹೇಳಲು ತೆರಳಿದ್ದ ಸ್ವಾಮಿಗಳಿಗೆ ಆತನ ಪತ್ನಿ ಮತ್ತು ಮಕ್ಕಳು ಉಪವಾಸದಿಂದ ದು:ಖಿಸುವುದನ್ನು ಕಂಡ ಮಹಾಂತ ಶಿವಯೋಗಿಗಳು ಇಂತಹ ಸಾವಿರಾರು ಕುಟುಂಬಗಳ ಕುಡಿತ ಮತ್ತು ಇತರೇ ದುಶ್ಚಟಗಳಿಂದ ಹಾಳಾಗಿರುವುದನ್ನು ಅರಿತು,ಇಂತಹ ದುಶ್ಚಟಗಳಿಗೆ ಒಳಗಾಗಿರುವವನ್ನು ಇದರಿಂದ ಮುಕ್ತಿಗೊಳಿಸುವ ಉದ್ದೇಶದಿಂದ ಮಹಾಂತ ಜೋಳಿಗೆ ಯೋಜನೆ ಆರಂಭಿಸಿದರು. ಮಹಾಂತ ಎಂದರೆ ಧರ್ಮಾಧಿಕಾರಿ, ಧರ್ಮದ ಗುರು ಅಥವಾ ಸ್ವಾಮೀಜಿ, ಜೋಳಿಗೆ ಎಂದರೆ ಬಟ್ಟೆಯ ಚೀಲ.
ಮಹಾಂತ ಜೋಳಿಗೆ ಹಿಡಿದು , ಕುಡಿತದ ಚಟದಿಂದ ನಿಧನನಾದ ಪ.ಜಾತಿಯ ಯುವಕನ ಕೇರಿಗೆ ಮೊದಲಿಗೆ ತೆರಳಿದ ಸ್ವಾಮೀಜಿಗಳು, ಅಲ್ಲಿನ ಗುಡಿಸಲು ಮನೆಗಳಿಗೆ ತೆರಳಿ ಮದ್ಯಪಾನ, ತಂಬಾಕು ಸೇರಿದಂತೆ ಎಲ್ಲಾ ರೀತಿಯ
ದುರ್ವ್ಯಸನ,ದುಶ್ಚಟಗಳ ಬಗ್ಗೆ ಅಲ್ಲಿನ ಜನತೆಗೆ ಮನ ಮುಟ್ಟುವಂತೆ ತಿಳುವಳಿಕೆ ನೀಡಿದರು. ಅವರ ಮಾತುಗಳಿಗೆ
ಮನಪರಿವರ್ತನೆಯಾದ ಜನ ತಮ್ಮ ಎಲ್ಲಾ ದುಶ್ಚಟಗಳ ವಸ್ತುಗಳನ್ನು ಸ್ವಾಮೀಜಿ ಅವರ ಜೋಳಿಗೆಗೆ ಹಾಕಿ, ಇನ್ನೆಂದೂ ಅವುಗಳನ್ನು ಬಳಸುವುದಿಲ್ಲ ಎಂದು ವಚನ ನೀಡಿದರು.
ಜಾತಿ-ಮತ-ಪಂಗಡ-ಧರ್ಮ-ಭಾಷೆ-ದೇಶವೆನ್ನದೇ 42 ವರ್ಷಗಳ ಕಾಲ ದೇಶದಲ್ಲಿ ಮಾತ್ರವಲ್ಲದೇ ಇಂಗ್ಲೆಂಡ್
ಸೇರಿದಂತೆ ವಿದೇಶದಲ್ಲೂ ತಮ್ಮ ಮಹಾಂತ ಜೋಳಿಗೆ ಹಿಡಿದು ಜನರಲ್ಲಿನ ದುಶ್ಚಟಗಳ ಭಿಕ್ಷೆ ಬೇಡಿದ ಮಹಾಂತ ಶಿವಯೋಗಿಗಳು ವ್ಯಸನ ಮುಕ್ತ ವ್ಯಕ್ತಿ-ಕುಟುಂಬ-ಸಮಾಜ- ಗ್ರಾಮಗಳ ನಿರ್ಮಾಣ ಮಾಡುವುದರ ಜೊತೆಗೆ, ತಮ್ಮ ಜೋಳಿಗೆ ಕಾರ್ಯಕ್ರಮದಲ್ಲಿ ನಾಡಿನ ಪ್ರಖ್ಯಾತ ವೈದ್ಯರು, ಸಮಾಜ ವಿಜ್ಞಾನಿಗಳು, ಸಾಹಿತಿಗಳು, ಸಮಾಜ ಕಳಕಳಿಯ ಕವಿಗಳು, ಧರ್ಮ ಗುರುಗಳನ್ನು ಆಹ್ವಾನಿಸಿ ಅವರಿಂದ ಉಪನ್ಯಾಸಗಳನ್ನು ಮಾಡಿಸುವ ಮೂಲಕ ಚಟಗಳಿಗೆ ವ್ಯಸನಗಳಿಗೆ ದಾಸರಾದವರನ್ನು ಪರಿವರ್ತನೆ ಮಾಡುವುದರ ಜೊತೆಗೆ ಮಕ್ಕಳು, ವಿದ್ಯಾರ್ಥಿಗಳು– ಯುವ ಜನಾಂಗ ಇಂತಹ ಚಟಗಳಿಗೆ ಬಲಿಯಾದಂತೆ ಎಚ್ಚರ ಮೂಡಿಸುತ್ತಿದ್ದರು. ಇದರಿಂದಾಗಿ ಲಕ್ಷಾಂತರ ಜನ ವ್ಯಸನಗಳಿಂದ ಮುಕ್ತರಾಗಿ ಅವರ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿವೆ.
ಮಹಾಂತ ಜೋಳಿಗೆಯ ಶಿವಶಿಲ್ಪಿ, ವ್ಯಸನ ಮುಕ್ತ ಆಂದೋಲನದ ಹರಿಕಾರರು ಆಗಿದ್ದ ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನವಾದ ಆಗಸ್ಟ್ 1 ಅನ್ನು, ರಾಜ್ಯ ಸರ್ಕಾರವು ರಾಜ್ಯಾದ್ಯಂತ ವ್ಯಸನ ಮುಕ್ತ ದಿನವನ್ನಾಗಿ ಆಚರಿಸಲು ನಿರ್ಧರಿಸಿ ಆದೇಶಿಸಿದ್ದು, ಕರ್ನಾಟಕ ರಾಜ್ಯವನ್ನು ವ್ಯಸನ ಮುಕ್ತ ರಾಜ್ಯವಾಗಿ ಮಾಡಲು ಹಾಗೂ ಸಾರ್ವಜನಿಕರು ಹಾಗೂ ಯುವಜನತೆ ವ್ಯಸನಗಳಿಂದ ಮುಕ್ತವಾಗಲು ಈ ದಿನಾಚರಣೆಯು ಪ್ರೇರಣೆಯಾಗಲಿದೆ.