ಬರ್ಮಿಂಗ್ ಹ್ಯಾಮ್: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ, ಗುರುರಾಜ ಪೂಜಾರಿ ಪುರುಷರ 61 ಕೆಜಿ ತೂಕದ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಬೆಳ್ಳಿ ಪದಕ ಗೆದ್ದಿದ್ದ ಗುರುರಾಜ, ಈ ಬಾರಿ ತೂಕದ ವಿಭಾಗದಲ್ಲಿ ಮೇಲಕ್ಕೇರಿದ್ದಾರೆ. ಕೆನಡಾದ ಯೂರಿ ಸಿಮಾರ್ಡ್ ಅವರೊಂದಿಗಿನ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಅವರು ಕಂಚಿನ ಪದಕ ಗೆಲ್ಲಲು ತಮ್ಮ ಅಂತಿಮ ಪ್ರಯತ್ನದಲ್ಲಿ 151 ಕೆಜಿ ಎತ್ತಬೇಕಾಯಿತು. ಗುರುರಾಜ್ ಒಟ್ಟು 269 ಕೆಜಿ (ಸ್ನ್ಯಾಚ್-118 ಕೆಜಿ; ಕ್ಲೀನ್ ಜರ್ಕ್-151 ಕೆಜಿ) ಎತ್ತಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಿ.ಗುರುರಾಜ ಭಾರತಕ್ಕೆ ಮತ್ತೊಮ್ಮೆ ಹೆಮ್ಮೆ ತಂದಿದ್ದಾರೆ. ಇಂತಹ ಇನ್ನೂ ಹಲವು ಸ್ಪೂರ್ತಿದಾಯಕ ಸಾಧನೆಗಳನ್ನು ಮಾಡಲಿ ಎಂದು ಹಾರೈಸಿದ್ದಾರೆ.
ಪಿ.ಗುರುರಾಜ ಅವರ ಸಾಧನೆಗೆ ಅತೀವ ಸಂತಸವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಉತ್ತಮ ಸ್ಥಿತಿಸ್ಥಾಪಕತ್ವ ಮತ್ತು ನಿರ್ಣಯವನ್ನು ಪ್ರದರ್ಶಿಸಿದರು. ಅವರ ಕ್ರೀಡಾ ಪಯಣದಲ್ಲಿ ಇನ್ನೂ ಹಲವು ಮೈಲಿಗಲ್ಲುಗಳು ಸ್ಥಾಪನೆಯಾಗಲಿ ಎಂದು ಪ್ರಧಾನಿ ಹಾರೈಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಟ್ವೀಟ್‌ನಲ್ಲಿ ಗುರುರಾಜ ಅವರು ಪದಕದಿಂದ ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ. ಅವರು ಕುಂದಾಪುರ ತಾಲೂಕಿನವರಾಗಿದ್ದು, ಇದು ರಾಜ್ಯಕ್ಕೆ ಗೌರವದ ವಿಚಾರ. ಅವರ ನಿರಂತರ ಪರಿಶ್ರಮ ಮತ್ತು ಅದಮ್ಯ ಪರಿಶ್ರಮದ ಫಲವಾಗಿ ಇಡೀ ರಾಷ್ಟ್ರವೇ ಅವರ ಗೆಲುವಿಗೆ ಸಂಭ್ರಮಿಸುತ್ತಿದೆ ಎಂದಿದ್ದಾರೆ.
ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ಪದಕದೊಂದಿಗೆ ಗುರುರಾಜ ಮನೆಗೆ ಇನ್ನಷ್ಟು ವೈಭವವನ್ನು ಮರಳಿ ತಂದರು. ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ ಅವರು ಪುಟಿದೇಳುವ ರೀತಿ ಶ್ಲಾಘನೀಯವಾಗಿದೆ ಎಂದು ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಗುರುರಾಜ ಕಳೆದ ಮೇ ತಿಂಗಳಲ್ಲಿ ಸೌಜನ್ಯ ಅವರನ್ನು ಮದುವೆಯಾಗಿದ್ದರು ಆದರೆ ಒಂದು ವರ್ಷದಿಂದ ಮನೆಗೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ. ಇದಲ್ಲದೆ ಮಣಿಕಟ್ಟು ಮತ್ತು ಮೊಣಕಾಲಿನ ಗಾಯಗಳು ಕೂಡಾ ಅವರನ್ನು ಬಾಧಿಸುತ್ತಿದ್ದವು. ಆದರೆ ಇವೆಲ್ಲಾ ಕಷ್ಟಗಳ ನಡುವೆಯೂ ಗುರುರಾಜ್ ಎರಡನೇ ಬಾರಿ ಪದವನ್ನು ಗೆದ್ದು ಭಾರತೀಯರೆಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಭಾರತೀಯ ವಾಯುಪಡೆಯಲ್ಲಿ ಏರ್‌ಕ್ರಾಫ್ಟ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಗುರುರಾಜ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಂಡ್ಸೆ ಮೂಲದವರು. ಲಾರಿ ಡ್ರೈವರ್ ಮಹಾಬಲ ಪೂಜಾರಿ ಮತ್ತು ಗೃಹಿಣಿ ಪದ್ದು ಪೂಜಾರ್ತಿ ದಂಪತಿಗೆ ಜನಿಸಿದ ಗುರುರಾಜ್ ಅವರಿಗೆ ಎಂಟು ಜನ ಸಹೋದರರಿದ್ದಾರೆ. ಚಿಕ್ಕಂದಿನಲ್ಲಿ ಕುಸ್ತಿಪಟುವಾಗಿದ್ದ ಗುರುರಾಜ್ ಸುಕೇಶ್ ಶೆಟ್ಟಿ ಬಳಿ ಕುಸ್ತಿಯನ್ನೂ ಕಲಿತಿದ್ದಾರೆ. ಜೀವನದಲ್ಲಿ ಸಂಘರ್ಷಗಳನ್ನು ಎದುರಿಸಿ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡ ಗುರುರಾಜ್ ಅವರ ಸಾಧನೆ ಯುವಕರಿಗೆ ಮಾದರಿಯಾಗಿದೆ.