ಉಡುಪಿ: ಭಾರತೀಯ ಅಂಚೆ ಇಲಾಖೆಯ ವತಿಯಿಂದ ಮನೆಯಲ್ಲಿ ಕುಳಿತು ದೇಶದ ಯಾವುದೇ ಪ್ರದೇಶಕ್ಕೆ ರಾಖಿಯನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸುವ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಕೇವಲ 120 ರೂ. ವೆಚ್ಚದಲ್ಲಿ ಸಹೋದರರಿಗೆ ಹಾಗೂ ಲಡಾಕ್ ಗಡಿ ಪ್ರದೇಶದಲ್ಲಿರುವ ಸೇನಾ ಯೋಧರಿಗೂ ರಾಖಿ ತಲುಪಿಸುವ ಅವಕಾಶ ಕಲ್ಪಿಸಲಾಗಿದೆ.
ಈ ಸೇವಾ ಯೋಜನೆಯಲ್ಲಿ www.karnatakapost.gov.in/Rakhi_Post ಗೆ ಲಾಗಿನ್ ಆಗಿ ಕಳುಹಿಸುವವರ
ಪೂರ್ಣ ವಿವರಗಳನ್ನು ನೀಡಿದಾಗ ಏಳು ವಿಧದ ಆಕರ್ಷಕ ವಿನ್ಯಾಸವುಳ್ಳ ರಾಖಿಗಳನ್ನು ವೀಕ್ಷಿಸಬಹುದಾಗಿದ್ದು, ಪ್ರತಿಯೊಂದು ವಿನ್ಯಾಸದ ಎದುರು ವಿನ್ಯಾಸ ಅಂಕಿ ನಮೂದಿಸಿದ್ದು ನಮಗೆ ಅಗತ್ಯವಿರುವ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ನಂತರ ಮೂರು ರೀತಿಯ ಮುದ್ರಿತ ಸಂದೇಶಗಳನ್ನು ಆಯ್ಕೆ ಮಾಡುವ ಅಥವಾ ನಮಗೆ ಬೇಕಾದ ಸಂದೇಶವನ್ನು ಫೋಟೊ ತೆಗೆದು ಕಳುಹಿಸುವ ಹಾಗೂ ಕೊನೆಯಲ್ಲಿ ಸ್ವೀಕರಿಸುವವರ ಪೂರ್ಣ ವಿವರಗಳನ್ನು ಬರೆಯಲು ಅವಕಾಶವಿದೆ.
ರಾಖಿಗಳ ಸೀಮಿತ ದಾಸ್ತಾನು ಲಭ್ಯವಿದ್ದು, ಈ ಸೇವಾ ವಿಧಾನದ ಮೂಲಕ ರಾಖಿ ಕಳುಹಿಸಲು ಆಗಸ್ಟ್ 6 ಕೊನೆಯ ದಿನವಾಗಿದೆ. ರಾಖಿ ಕಳುಹಿಸಲು ನಿಗದಿಪಡಿಸಲಾದ ಶುಲ್ಕವನ್ನು ಅಂತರ್ಜಾಲ ಬ್ಯಾಂಕಿಂಗ್, ಅಂಚೆ ಇಲಾಖೆಯ ಐಪಿಪಿಬಿ, ಗೂಗಲ್ ಪೇ, ಭೀಮ್ ಆ್ಯಪ್, ಫೋನ್ ಪೇ, ಮುಂತಾದ ನೆಟ್ ಪೇಮೆಂಟ್ ವಿಧಾನಗಳ ಮೂಲಕ ಪಾವತಿಸಬಹುದಾಗಿದ್ದು, ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.