ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ: ಮಹಿಳಾ ಆಯೋಗದಿಂದ ನೋಟಿಸ್

ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧುರಿ ಅವರಿಗೆ ಖುದ್ದು ಹಾಜರಾಗುವಂತೆ ಮತ್ತು ಅಧ್ಯಕ್ಷೆ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಸಂಬೋಧಿಸಿರುವ ಹೇಳಿಕೆಗಳಿಗೆ ಲಿಖಿತ ವಿವರಣೆಯನ್ನು ನೀಡುವಂತೆ ನೋಟಿಸ್ ಕಳುಹಿಸಿದೆ. ಮುಂದಿನ ತಿಂಗಳು 3ಕ್ಕೆ ವಿಚಾರಣೆ ನಿಗದಿಯಾಗಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಮತ್ತು ಅವರ ಅವಹೇಳನಕಾರಿ ಹೇಳಿಕೆಗಾಗಿ ಚೌಧರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಯೋಗವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದೆ.

ಘಟನೆಯ ವಿವರ:

ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ, ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ‘ರಾಷ್ಟ್ರಪತ್ನಿ’ ಎಂದು ಸಂಬೋಧಿಸಿದ್ದರು. ಇದು ಅತ್ಯಂತ ಅವಹೇಳನಕಾರಿ ಸಂಬೋಧನೆ ಎಂದು ಆಡಳಿತಾರೂಢ ಬಿಜೆಪಿ ಪಕ್ಷವು ಕಾಂಗ್ರೆಸ್ ಮೇಲೆ ಕಿಡಿಕಾರಿತ್ತು. ಕಾಂಗ್ರೆಸ್ ಉದ್ದೇಶಪೂರ್ವಕವಾಗಿಯೇ ದ್ರೌಪದಿ ಮುರ್ಮು ಅವರನ್ನು ಅವಮಾನಿಸುವ ಕಾರಣಕ್ಕಾಗಿ ಹೀಗೆ ಸಂಭೋಧಿಸಿತ್ತು ಎನ್ನುವುದು ಬಿಜೆಪಿಯ ಆರೋಪ.

ಘಟನೆ ಬಗ್ಗೆ ಸ್ಪಷ್ಟಿಕರಣ ನೀಡಿರುವ ಅಧೀರ್ ರಂಜನ್, ತಾನು ಬಾಯಿ ತಪ್ಪಿನಿಂದ ಈ ರೀತಿ ಹೇಳಿದ್ದು, ಉದ್ದೇಶಕಪೂರ್ವಕವಲ್ಲ ಆದ್ದರಿಂದ ಕ್ಷಮೆ ಕೇಳುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಈ ಹಿನ್ನೆಯಲ್ಲಿ ಕೇಂದ್ರ ಮಹಿಳಾ ಆಯೋಗವು ಅಧೀರ್ ರಂಜನ್ ಚೌಧರಿ ಅವರಿಗೆ ನೋಟಿಸ್ ನೀಡಿದೆ.