ಉಡುಪಿ: ಸಿಎ ಸಿಎಸ್ ಉತ್ತೀರ್ಣರಾದ ತ್ರಿಶಾ ಕ್ಲಾಸಸ್ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

ಉಡುಪಿ: ತ್ರಿಶಾ ಕ್ಲಾಸಸ್ ನಲ್ಲಿ ತರಬೇತಿ ಪಡೆದು ಕಳೆದ ಜೂನ್‍ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸಿ.ಎ. ಫೈನಲ್, ಸಿ.ಎ. ಇಂಟರ್ ಮಿಡಿಯೆಟ್ ಮತ್ತು ಸಿಎಸ್‍ಇಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉಡುಪಿಯ ತ್ರಿಶಾ ವಿದ್ಯಾ ಕಾಲೇಜಿನ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿ.ಎ.ಆದರ್ಶ್ ಶೆಣೈ ಅವರು “ನಿರಂತರ ಅಭ್ಯಾಸ, ಅಧ್ಯಯನ ಮತ್ತು ಪರಿಶ್ರಮದಿಂದ ವಿದ್ಯಾರ್ಥಿಗಳು ಜೀವನದಲ್ಲಿ ಯಶವನ್ನು ಸಾಧಿಸಬಹುದು” ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಿಎ ಗೋಪಾಲ ಕೃಷ್ಣ ಭಟ್ ಮಾತನಾಡಿ, “ಸತತ ಪರಿಶ್ರಮ ಎಂದಿಗೂ ಸಾಧನೆಗೆ ಪೂರಕ, ಎಡವಿದಾಗ ಮತ್ತೆ ಎದ್ದು ನಿಂತು ಗುರಿಯೆಡೆಗೆ ಸಾಗಿದರೆ ಮಾತ್ರ ಸಾಧನೆಗಳು ಸಾಧ್ಯವಾಗಲಿವೆ” ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಈ ಸಂದರ್ಭದಲ್ಲಿ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹದಿನೈದು ವಿದ್ಯಾರ್ಥಿಗಳನ್ನು, ಸಿಎ ಇಂಟರ್ಮೀಡಿಯೆಟ್ ನಲ್ಲಿ ಉತ್ತೀರ್ಣರಾದ 34 ವಿದ್ಯಾರ್ಥಿಗಳನ್ನು ಮತ್ತು ಸಿಎಸ್ಇಇಟಿಯಲ್ಲಿ ಉತ್ತೀರ್ಣರಾದ ಮೂರು ವಿದ್ಯಾರ್ಥಿಗಳನ್ನು ಪೋಷಕರ ಸಮಕ್ಷಮದಲ್ಲಿ ಅಭಿನಂದನಾ ಪತ್ರ ಹಾಗೂ ಸ್ಮರಣೀಕೆಯನ್ನು ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಗುರುಪ್ರಸಾದ್ ರಾವ್, ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಇಂದುರೀತಿ, ತ್ರಿಶಾ ಸಮೂಹ ಸಂಸ್ಥೆಗಳ ಟ್ರಸ್ಟಿಗಳಾದ ನಮಿತಾ ಜಿ.ಭಟ್, ರಾಮ ಪ್ರಭು, ತ್ರಿಶಾ ಕ್ಲಾಸಸ್‍ನ ಉಡುಪಿ ಕೇಂದ್ರದ ಮುಖ್ಯಸ್ಥ ಮಹೇಶ್ ಭಟ್, ಶೈಕ್ಷಣಿಕ ಮುಖ್ಯಸ್ಥೆ ಪ್ರತಿಭಾ ನಾಯಕ್  ಉಪಸ್ಥಿತರಿದ್ದರು.

ಶ್ರೀನಂದನ್ ಜೋಷಿ ನಿರೂಪಿಸಿ, ಅಕ್ಷಯ್ ಹೆಗ್ಡೆ ವಂದಿಸಿದರು.