ಸುಳ್ಯ: ನಿನ್ನೆ ತಡರಾತ್ರಿ ಬಿಜೆಪಿ ಯುವ ಮೋರ್ಚಾದ ಮುಖಂಡ ಪ್ರವೀಣ್ ನೆಟ್ಟಾರೆ ಅವರ ಬರ್ಬರ ಹತ್ಯೆ ನಡೆದಿದ್ದು ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ ಶಿಕ್ಷಿಸುವ ಭರವಸೆ ನೀಡಿದ್ದರೂ ಸಾರ್ವಜನಿಕರ ಆಕ್ರೋಶ ಮಾತ್ರ ತಣ್ಣಗಾಗಿಲ್ಲ.
ಘಟನೆಯ ಬಳಿಕ ಸುದ್ದಿ ತಿಳಿದ ಸಂಸದ, ಸಚಿವರು, ಶಾಸಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ಸಂದರ್ಭ ಜನತೆಯ ಮಡುಗಟ್ಟಿದ ಆಕ್ರೋಶ ಕಾರಿಗೆ ಮುತ್ತಿಗೆ ಹಾಕುವ ರೂಪದಲ್ಲಿ ವ್ಯಕ್ತವಾಗಿದೆ.
ಸಂಸದ ನಳಿನ್ ಕುಮಾರ್, ಸಚಿವ ಸುನಿಲ್ ಕುಮಾರ್ ಮತ್ತು ಸ್ಥಳೀಯ ಶಾಸಕರ ಕಾರಿಗೆ ಮುತ್ತಿಗೆ ಹಾಕಿದ ಸಾರ್ವಜನಿಕರು ಕಾರಿಗೆ ಗುದ್ದಿದ್ದಾರೆ. ಆ ಬಳಿಕ ಪೊಲೀಸರು ಉದ್ವಿಗ್ನ ಗುಂಪನ್ನು ಚದುರಿಸಿದ್ದಾರೆ. ಈ ಮಧ್ಯೆ ಕಲ್ಲು ತೂರಾಟದ ಘಟನೆಗಳೂ ನಡೆದಿವೆ. ಆಕ್ರೋಶಗೊಂಡ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ ಎನ್ನಲಾಗಿದೆ.
ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ಆಡಳಿತದಲ್ಲಿ ಕೆಲವೇ ತಿಂಗಳ ಅಂತರದಲ್ಲಿ ಇದು ಎರಡನೇ ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆಯಾಗಿದ್ದು, ಹರ್ಷನ ಕೊಲೆಯ ನೋವು ಮಾಸುವ ಮುನ್ನವೇ ಪ್ರವೀಣ್ ಕೊಲೆಯಾದದ್ದು ಮತ್ತು ಸರ್ಕಾರವು ಇದುವರೆಗೂ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಸರಕಾರದ ಬಗ್ಗೆ ಕಟು ಟೀಕೆಗಳು ವ್ಯಕ್ತವಾಗಿವೆ. ಹಿಂದೂ ಸಂಘಟನೆಯ ಮುಖಂಡ ಪ್ರಮೋದ್ ಮುತಾಲಿಕ್ ರಾಜ್ಯ ಸರಕಾರಕ್ಕೆ ಧೈರ್ಯ ಇಲ್ಲ ಎಂದು ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಪಕ್ಷ ಕೂಡಾ ತಪ್ಪು ಯಾರೇ ಮಾಡಿದ್ದರು ಕಠಿಣ ಶಿಕ್ಷೆ ಆಗಲಿ ಎಂದು ಒತ್ತಾಯಿಸಿದೆ.
ವಿಡಿಯೋ ಕೃಪೆ: ಯೂಟ್ಯೂಬ್