ಬಿಜೆಪಿ ಯುವ ಮೋರ್ಚಾ ಮುಖಂಡನ ಹತ್ಯೆ: ಪುತ್ತೂರಿನಲ್ಲಿ ಸೆಕ್ಷನ್ 144 ಜಾರಿ

ಮಂಗಳೂರು: ಬಿಜೆಪಿ ಯುವ ಮೋರ್ಚಾ ಮುಖಂಡನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ಎಂಬ ಯುವಕನ ​ ಹತ್ಯೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು (32) ಕೊಲೆಯಾದ ದುರ್ದೈವಿ. ಪ್ರವೀಣ್ ನೆಟ್ಟಾರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು. ಬೆಳ್ಳಾರೆ ಪೇಟೆಯಲ್ಲಿ ತನ್ನ ಅಂಗಡಿಯನ್ನು ಮುಚ್ಚುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.

ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ್ದಾರೆ. ದುಷ್ಕರ್ಮಿಗಳು  ಹತ್ಯೆಗೈದು ಪರಾರಿಯಾಗಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಆರೋಪಿಗಳಿಗಾಗಿ ಬಲೆ ಬೀಸಿರುವ ಪೊಲೀಸರು ಕೇರಳ ಗಡಿ ಪ್ರದೇಶ ಹಾಗೂ ಪುತ್ತೂರಿನ ಸುತ್ತಮುತ್ತ ನಾಕಾಬಂದಿ ಹಾಕಿದ್ದಾರೆ. ನಾಕಾಬಂದಿ ಹಾಕಿ ಕೊಲೆ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಪುತ್ತೂರಿನಾದ್ಯಂತ 144 ಸೆಕ್ಷನ್ ಜಾರಿ

ಪುತ್ತೂರಿನಲ್ಲಿ ಪ್ರವೀಣ್ ಹತ್ಯೆ ಹಿನ್ನಲೆ ಪರಿಸ್ಥಿತಿ ಬಿಗಡಾಯಿಸಿದ್ದು, ಪುತ್ತೂರಿನಾದ್ಯಂತ 144 ಸೆಕ್ಷನ್ ಜಾರಿ ಮಾಡುವಂತೆ  ಡಿಜಿ ಐಜಿಪಿ ಪ್ರವೀಣ್ ಸೂದ್ ರಿಂದ ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಗೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಕಾನೂನು ಸಮಸ್ಯೆ ಆಗದಂತೆ ನೋಡಿಕೊಳ್ಳಲು ಹೇಳಲಾಗಿದೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಬೇಕಾದರೆ ಪಕ್ಕದ ಜಿಲ್ಲೆ ಅಥವಾ ಮಂಗಳೂರು ನಗರದಿಂದ ನಿಯೋಜನೆ ಮಾಡುವಂತೆ ಡಿಜಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಬೆಳ್ಳಾರೆಯಲ್ಲಿ ಮಸೂದ್ ಎಂಬ ಯುವಕನ ಕೊಲೆಯಾಗಿತ್ತು‌.  ಕ್ಷುಲ್ಲಕ ಕಾರಣಕ್ಕೆ ಕಾಸರಗೋಡು ನಿವಾಸಿ ಮಸೂದ್(18) ಮೇಲೆ ಅಭಿಲಾಶ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್, ಭಾಸ್ಕರ ಎಂಬವರು ಹಲ್ಲೆ ನಡೆಸಿದ್ದರು. ‌ಜು.19 ರಂದು ಸುಧೀರ್ ಎಂಬಾತ ಮಸೂದ್ ಕೈ ತಾಗಿದ ಕಾರಣಕ್ಕೆ ಹಲ್ಲೆ ನಡೆಸಿದ್ದ. ಆ ಬಳಿಕ ಸ್ಥಳೀಯ ಹನೀಫ್ ಎಂಬವನ ಮೂಲಕ ಮಸೂದ್‌ನನ್ನು ರಾಜಿ ಮಾತುಕತೆಗೆ ಕರೆದಿದ್ದಾರೆ.‌ ಹೀಗಾಗಿ ಮಸೂದ್ ಸೂಚಿಸಿದ ಸ್ಥಳಕ್ಕೆ ಬಂದಿದ್ದ ವೇಳೆ ಬಾಟಲಿಯಿಂದ ತಲೆಗೆ ಹಲ್ಲೆ ನಡೆಸಿದ್ದು,‌ ಚಿಕಿತ್ಸೆ ಫಲಿಸದೇ ಮಸೂದ್ ಸಾವನ್ನಪ್ಪಿದ್ದ. ಹೀಗಾಗಿ ಮಸೂದ್ ಹತ್ಯೆಗೆ ಪ್ರತೀಕಾರವಾಗಿ ಬಿಜೆಪಿ ಮುಖಂಡನ ಕೊಲೆ ಶಂಕೆ ವ್ಯಕ್ತವಾಗಿದೆ.

ಪ್ರವೀಣ್ ತಲೆಗೆ ತಲವಾರಿನಿಂದ ಮೂರು ಬಲವಾದ ಏಟು ಬಿದ್ದಿದೆ ಎನ್ನಲಾಗಿದೆ. ಹಂತಕರು ಆತನ ಬೆನ್ನಿಗೆ ಚೂರಿಯಿಂದ ಒಂದು ಬಾರಿ ಇರಿದಿದ್ದಾರೆ. ಸದ್ಯ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮುಕ್ತಾಯವಾಗಿದ್ದು, ಇಂದು ಅಂತ್ಯಕ್ರಿಯೆ ನಡೆಯಲಿದೆ.

ಪ್ರವೀಣ್ ಅಂತಿಮ ಯಾತ್ರೆ ನಡೆಸಲು ಬಿಜೆಪಿ ಕಾರ್ಯಕರ್ತರು, ಹಿಂದೂ ಪರ ಸಂಘಟನೆ ಕಾರ್ಯಕರ್ತರು ತಯಾರಿ ನಡೆಸಿದ್ದಾರೆ. ಸರಕಾರಿ ಆಸ್ಪತ್ರೆಯಿಂದ ದರ್ಬೆ ಸರ್ಕಲ್ ಮೂಲಕ ಬೆಳ್ಳಾರೆಗೆ ಮೃತದೇಹ ತರಲು ನಿರ್ಧರಿಸಲಾಗಿದೆ. ದರ್ಬೆ, ಸವಣೂರು, ಕಾಣಿಯೂರು, ನಿಂತಿಕಲ್ಲು ಮಾರ್ಗವಾಗಿ ಬೆಳ್ಳಾರೆಗೆ ಸಾಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಕ್ಷದ ಕಾರ್ಯಕರ್ತನ ಅಂತಿಮ ಯಾತ್ರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಏಳೂ ಶಾಸಕರು ಹಾಗೂ ಸಚಿವರು ಭಾಗಿಯಾಗಬೇಕೆಂದು ಹಿಂದೂ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ತಡರಾತ್ರಿಯವರೆಗೂ ಪ್ರತಿಭಟನೆ ಮುಂದುವರೆಸಿದ್ದರು. ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿದ್ದರು. ಹೀಗಾಗಿ ತಡರಾತ್ರಿ ಆಸ್ಪತ್ರೆ ಗೆ ಭೇಟಿ ನೀಡಿದ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮೃತ ಪ್ರವೀಣ್ ಕುಟುಂಬಸ್ಥರು ಮತ್ತು ಆಪ್ತವಲಯದೊಂದಿಗೆ ಮಾತುಕತೆ ನಡೆಸಿದ್ದರು. ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಮನವಿ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕು ಬಂದ್‌ಗೆ ಹಿಂದೂ ಪರ ಸಂಘಟನೆಗಳು ಕರೆ ನೀಡಿವೆ. ಸ್ವಯಂ ಪ್ರೇರಿತರಾಗಿ‌ ಬಂದ್ ಮಾಡುವಂತೆ ಹಿಂದೂ ಸಂಘಟನೆಗಳು ಮನವಿ ಮಾಡಿವೆ. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಪುತ್ತೂರಿನ ಅಂಬಿಕಾ ಕಾಲೇಜ್ ಹಾಗೂ ವಿವೇಕಾನಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಜಿಲ್ಲೆಯು ಬೂದಿ ಮುಚ್ಚಿದ ಕೆಂಡದಂತಿದೆ.