ಕಟಪಾಡಿ: ಧಾರ್ಮಿಕ ಸ್ಥಳದ ಪಕ್ಕ ಗಬ್ಬು ನಾರುವ ಕಸದ ರಾಶಿ, ನೊಂದ ಜನತೆಯ ಗೋಳು ಕೇಳುವವರೇ ಇಲ್ಲ 

ಉಡುಪಿ: ಕಟಪಾಡಿ ಏಣಗುಡ್ಡೆ ಪಂಚಾಯತ್ ವ್ಯಾಪ್ತಿಯ ಹಳೆ ರಸ್ತೆ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಹಾಗೂ ನಾಗಬನ ಇರುವ ಸ್ಥಳದಲ್ಲಿ ಪ್ಲಾಸ್ಟಿಕ್, ಮಧ್ಯದ ಬಾಟಲು, ಮಲ ಮೂತ್ರದ ಪ್ಯಾಡ್, ಮಾಂಸ- ಮೂಳೆ ಮುಂತಾದವುಗಳನ್ನು ಹಾಕಲಾಗುತ್ತಿದ್ದು, ಧಾರ್ಮಿಕ ಪರಿಸರವು ಗಬ್ಬು ನಾಥದ ಕಸದ ರಾಶಿಯಲ್ಲಿ ಮುಳುಗಿದೆ.

ಈಗಾಗಲೇ ಪಂಚಾಯತ್ ಸದಸ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದ್ದರೂ ಇದುವರೆಗೂ ಯಾರೂ ಇತ್ತ ಮುಖ ಮಾಡಿಲ್ಲ.

ಹತ್ತಿರದ ಫ್ಲಾಟ್ ಗಳು, ಮನೆಗಳಲ್ಲಿ ಒಟ್ಟಾದ ಕಸ, ಪ್ಲಾಸ್ಟಿಕ್ ಹಾಗೆ ಮಲ ಮೂತ್ರ ದ ಪ್ಯಾಡ್ಗಳನ್ನೂ ಇಲ್ಲಿ ಬಿಸಾಡುವುದು ಗಮನಕ್ಕೆ ಬಂದಿದೆ.

ಈ ಮಲ ಮೂತ್ರ ಭರಿತ ಕಸವನ್ನು ಬೀದಿ ನಾಯಿಗಳು ಊರೆಲ್ಲಾ ಹರಡಿ ಗಲೀಜು ಮಾಡುತ್ತಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಅಸಹ್ಯ ಪಡುವಂತಾಗಿದೆ. ಕಸದಿಂದಾಗಿ ಪರಿಸರದ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ.

ಸಂಬಂಧ ಪಟ್ಟವರು ಈ ಕೂಡಲೇ ಕಸವನ್ನು ವಿಲೇವಾರಿ ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪರಿಸರದಲ್ಲಿ ಸಿಸಿ ಕ್ಯಾಮರವನ್ನು ಅಳವಡಿಸಿ ಯಾರು ಕಸ ಹಾಕುತ್ತಾರೋ ಅವರ ಮನೆ ಅಥವಾ ಫ್ಲಾಟ್ ಗೆ ಅಲ್ಲಿ ಒಟ್ಟಾದ ಎಲ್ಲ ಕಸವನ್ನು ವಾಪಸ್ ಹಾಕಲಾಗುವುದು ಅಥವಾ ಅವರಿಂದಲೇ ದಂಡ ಸಮೇತ ಕಸ ವಿಲೇವಾರಿ ಮಾಡಿಸಲಾಗುವುದು ಎಂದು ನೊಂದ ಕಟಪಾಡಿ ಹಳೆ ರಸ್ತೆ ಗ್ರಾಮಸ್ಥರು ಎಚ್ಚರಿಸಿದ್ದಾರೆ.