ಪಬ್ ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳದಿಂದ ತಡೆ ಪ್ರಕರಣ: ಯಾವುದೇ ದಾಳಿ ನಡೆದಿಲ್ಲ ಎಂದ ಮಂಗಳೂರು ‌ಕಮಿಷನರ್ ಶಶಿಕುಮಾರ್

ಮಂಗಳೂರು: ಇಲ್ಲಿನ ಪಬ್ ಒಂದರಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ತಡೆಯೊಡ್ಡಿದ ಪ್ರಕರಣ ಸಂಬಂಧಿಸಿ ಮಂಗಳೂರು ‌ಕಮಿಷನರ್ ಶಶಿಕುಮಾರ್ ಹೇಳಿಕೆ ನೀಡಿದ್ದು, ಪಬ್ ಮೇಲೆ ದಾಳಿ ಅಂತ ಕೆಲ ಮಾಧ್ಯಮಗಳಲ್ಲಿ ಬಂದಿದೆ. ಆದರೆ ಈ ವರದಿ ಸತ್ಯಕ್ಕೆ ದೂರ, ಯಾವುದೇ ಗ್ರಾಹಕರು ಅಥವಾ ಯಾರ ಮೇಲೂ ದಾಳಿ ನಡೆದಿಲ್ಲ ಎಂದು ಮಂಗಳೂರು ‌ಕಮಿಷನರ್ ಸ್ಪಷ್ಟನೆ ನೀಡಿದ್ದಾರೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡಿದೆ.

ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮದ್ಯ ಪೂರೈಕೆ ನಡೆಸುತ್ತಿದುದನ್ನು ಆರೋಪಿಸಿ ಸಂಘಟನೆಯವರು ಬಂದಿದ್ದಾರೆ. ಬೌನ್ಸರ್ ಹೇಳಿದ ಪ್ರಕಾರ ಸಂಘಟನೆ ಕಾರ್ಯಕರ್ತರು ಪಬ್ ಒಳಗೆ ಹೋಗಿಲ್ಲ. ಹೊರ ಭಾಗದಲ್ಲೇ ಮಾತನಾಡಿ ಹೋಗಿದ್ದಾರೆ. ಇದನ್ನು ಮ್ಯಾನೇಜರ್ ಗಮನಕ್ಕೆ ತಂದಾಗ ಆತ ವಿದ್ಯಾರ್ಥಿಗಳ ಐಡಿ ಕೇಳಿದ್ದಾರೆ.‌ ಆಗ ಕೆಲ ವಿದ್ಯಾರ್ಥಿಗಳು ಅಲ್ಲಿಂದ ಹೊರಗೆ ಹೋಗಿದ್ದಾರೆ.‌ ಆದರೆ ಪಬ್ ನ ಒಳಗೆ ಯಾವುದೇ ಸಂಘಟನೆಯ ಕಾರ್ಯಕರ್ತರು ಬಂದಿಲ್ಲ. ಯಾವುದೇ ನಿಯಮ ಉಲ್ಲಂಘನೆ ಆದರೂ ಸಂಬಂಧಿಸಿದ ಇಲಾಖೆಗೆ ಮೊದಲು ಮಾಹಿತಿ ಕೊಡಬೇಕು. ಅದು ಬಿಟ್ಟು ಸಂಘಟನೆ ಹೆಸರಲ್ಲಿ ಈ ರೀತಿ ಪರಿಶೀಲನೆಗೆ ಅವಕಾಶ ಇಲ್ಲ.‌ ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಪಬ್ ಮ್ಯಾನೇಜರ್ ಮತ್ತು ಬೌನ್ಸರ್ ಹೇಳಿಕೆ ಪಡೆಯಲಾಗಿದೆ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ಕಾಲೇಜು ವಿದ್ಯಾರ್ಥಿಗಳ ಅಶ್ಲೀಲ ವಿಡಿಯೋ ವೈರಲ್ ಆಗಿದ್ದಕ್ಕೂ ಈ ಘಟನೆಗೂ ಸಂಬಂಧವಿಲ್ಲ, ಈ ಎರಡು ವಿದ್ಯಾರ್ಥಿಗಳ ಗುಂಪು ಬೇರೆ. ಸಾಮಾಜಿಕ ಜಾಲತಾಣದಲ್ಲಿ ಈ ಗುಂಪುಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದು, ಇವೆರಡು ಪ್ರತ್ಯೇಕ ಪ್ರಕರಣಗಳು.

ಎಲ್ಲರೂ ವಿದ್ಯಾರ್ಥಿಗಳಾದ ಕಾರಣ ಅವರನ್ನು ಸಂಪರ್ಕಿಸಲಾಗುತ್ತದೆ. ಡ್ರಗ್ ಮಾಫಿಯಾ ತಡೆಗೆ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ. ಗಾಂಜಾ,ಎಂಡಿಎಂ ಸೇರಿ ಹಲವು ಡ್ರಗ್ಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಮಂಗಳೂರು ನಗರ ಕೇರಳಕ್ಕೆ ತುಂಬಾ ಹತ್ತಿ ಇರುವ ಕಾರಣ ಡ್ರಗ್ಸ್ ಚಲನೆ ಇದೆ. ಹೀಗಾಗಿ ಇದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಕೆಲಸ ನಡೆಯುತ್ತಿದೆ ಎಂದು ಶಶಿಕುಮಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.