ಪರ್ಕಳ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಸರಿಪಡಿಸಲು ಹದಿನೈದು ದಿನ ಗಡುವು: ಡಾ.ಪಿ.ವಿ.ಭಂಡಾರಿ ನೇತೃತ್ವದಲ್ಲಿ ಪ್ರತಿಭಟನೆ

ಪರ್ಕಳ: ಭಾನುವಾರದಂದು ಪರ್ಕಳದ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಮನೋವೈದ್ಯ ಡಾ.ಪಿ.ವಿ.ಭಂಡಾರಿ ನೇತೃತ್ವದಲ್ಲಿ ಧರಣಿ ನಡೆಯಿತು. ಪರ್ಕಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಮಾನ‌ ಮನಸ್ಕರು ಮತ್ತು ಪರ್ಕಳ ನಿವಾಸಿಗಳು ಪಾಲ್ಗೊಂಡರು.

 

ಧರಣಿಯ ನೇತೃತ್ವ ವಹಿಸಿದ ಡಾ.ಪಿ.ವಿ.ಭಂಡಾರಿ ಮಾತನಾಡಿ ಶಾಸಕರು, ಸಂಸದರು ಮತ್ತು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇತ್ತೀಚೆಗೆ ಅಧ್ಯಯನಕ್ಕಾಗಿ ಶಾಸಕರೆಲ್ಲ ಲೇಹ್ ಲಡಾಕ್ ಗೆ ಹೋಗಿದ್ದಾರೆ. ಅಲ್ಲಿಗೆ ಹೋಗುವ ಅವಶ್ಯಕತೆ ಇಲ್ಲ, ನಮ್ಮ ಪರ್ಕಳ ರಸ್ತೆಗೆ ಬಂದರೆ ಸಾಕು, ನಿಮಗೆ ಇಲ್ಲಿಯೇ ಲೇಹ್ ಲಡಾಕ್ ನ ಅನುಭವವಾಗುತ್ತದೆ. ನಿಮಗೆಲ್ಲ 25 ಲಕ್ಷದ ಕಾರಿರಬಹುದು, ಬಡವರಿಗೆ ಅದ್ಯಾವುದೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿಯವರೇ ದಯವಿಟ್ಟು ನಿಮ್ಮ ನಂಬರ್ ಕೊಡಿ, ನಿಮಗೆ ಫೋನ್ ಮಾಡುತ್ತೇವೆ, ಯಾಕೆಂದರೆ ಜನಪ್ರತಿನಿಧಿಗಳು ನಿಮ್ಮ ಹೆಸರಲ್ಲಿ ಗೆದ್ದಿದ್ದಾರೆ, ಆದರೆ ಅವರು ಜನರಿಗಾಗಿ ಏನೂ ಮಾಡುತ್ತಿಲ್ಲ. ಈಗ ಇರುವುದು ಡಬಲ್ ಎಂಜಿನ್ ಸರಕಾರ ಅಲ್ಲ, ಟ್ರಿಪಲ್ ಎಂಜಿನ್ ಸರಕಾರ. ನಗರಸಭೆ, ವಿಧಾನಸಭೆ ಮತ್ತು ಪಾರ್ಲಿಮೆಂಟ್ ಮೂರೂ ಕಡೆ ನೀವು ಇದ್ದೀರಿ. ಆಗ, ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದೆ ಎನ್ನುತ್ತಿದ್ದೀರಿ. ಈಗ ಎಲ್ಲ ಕಡೆ ನೀವೇ ಇದ್ದೀರಿ. ನಿಮಗೆ ರಸ್ತೆ ಸರಿಪಡಿಸಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಇನ್ನು ಹದಿನೈದು ದಿನ ಗಡುವು ಕೊಡುತ್ತೇವೆ. ಅಷ್ಟರೊಳಗೆ ರಸ್ತೆ ಸರಿಪಡಿಸದಿದ್ದರೆ ಪರ್ಕಳ ರಸ್ತೆಯಲ್ಲೇ ಒಲಿಂಪಿಕ್ಸ್ ಹಮ್ಮಿಕೊಳ್ಳುತ್ತೇವೆ. ರನ್ನಿಂಗ್ ರೇಸ್ ಸಹಿತ ವಿವಿಧ ಆಟಗಳನ್ನು ಆಯೋಜಿಸುತ್ತೇವೆ. ಶಾಸಕರು ಎರಡು ವರ್ಷಗಳ ಹಿಂದೆಯೇ ಸರಿ ಪರಿಸುವ ಭರವಸೆ ನೀಡಿದ್ದರು. ಅದು ಕೇವಲ ಭರವಸೆಯಾಗಿಯೇ ಉಳಿದಿದೆ. ಓಟು ಹಾಕಿದ ನಮಗೆ ಸುಸಜ್ಜಿತ ರಸ್ತೆ ಪಡೆಯುವ ಹಕ್ಕು ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.