ಉಡುಪಿ: ದೊಡ್ಡಣ್ಣಗುಡ್ಡೆ ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇ.ಮೂ. ಕೃಷ್ಣಮೂರ್ತಿ ತಂತ್ರಿ ನೇತೃತ್ವದಲ್ಲಿ ಅರವಿಂದ ಹೆಬ್ಬಾರ್, ವಸಂತಲಕ್ಷ್ಮೀ ಹೆಬ್ಬಾರ್ ದಂಪತಿ ಸೇವಾರ್ಥವಾಗಿ ಏಕಕಾಲ ಶ್ರೀಚಕ್ರ ಮಂಡಲ ಪೂಜೆ ಸಂಪನ್ನಗೊಂಡಿತು.
ಪ್ರಾತಃಕಾಲ ಶ್ರೀ ನಾರಿಕೇಳ ಗಣಯಾಗದೊಂದಿಗೆ ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಇವರು, ದೀಪ ಪ್ರಜ್ವಲಿಸಿ ಪಂಚವರ್ಣದಿಂದ ಕೂಡಿದ ಬಿಂದುವನ್ನಿರಿಸಿ ಶ್ರೀಚಕ್ರಮಂಡಲ ರಚನೆಗೆ ಚಾಲನೆ ನೀಡಿದರು.
ವಿಶೇಷವಾಗಿ ಅಲಂಕರಿಸಿದ ಮಂಟಪದೊಳಗೆ ಶ್ರೀಚಕ್ರ ಯಂತ್ರ ರಚನೆ ಮಾಡಿ ಶ್ರೀ ರಾಜರಾಜೇಶ್ವರಿಯನ್ನು ವಿವಿಧ ಪುಷ್ಪಗಳಿಂದ ಅರ್ಚಿಸಿ, ಸ್ತುತಿಗಳಿಂದ ಸ್ತುತಿಸಿ ಲಲಿತಾ ಸಹಸ್ರನಾಮದಿಂದ ಪೂಜಿಸಲಾಯಿತು. ವಿಷ್ಣುಮೂರ್ತಿ ಉಪಾಧ್ಯಾಯ, ಶ್ರೀಕರ ಆಚಾರ್ಯ, ಉಮೇಶ್ ಭಟ್, ಹರಿ ಭಟ್ ಹೆಜಮಾಡಿ ಸಹಕರಿಸಿದರು. ಮಂಗಳೂರಿನ ಸುಬ್ರಹ್ಮಣ್ಯ ಕಾರಂತ್ ಮತ್ತು ಬಳಗದವರು ಅಷ್ಟಾವಧಾನವನ್ನು ನೆರವೇರಿಸಿದರು. ನಾಗೇಂದ್ರ ಕುಡುಪು ಮತ್ತು ಬಳಗದವರು ಚೆಂಡೆವಾದನ, ಮುರಳೀಧರ ಮುದ್ರಾಡಿ ಮತ್ತು ತಂಡದವರು ವಾದ್ಯಗೋಷ್ಠಿ ನಡೆಸಿಕೊಟ್ಟರು.
ಶ್ರೀಚಕ್ರ ನವಾವರಣ ಕೃತಿಯನ್ನು ಲತಾಂಗಿ ಸಿಸ್ಟರ್ಸ್ ನ ಅರ್ಚನಾ ಪ್ರಸ್ತುತಪಡಿಸಿದರು. ನೃತ್ಯ ಸೇವೆಯನ್ನು ಕುಮಾರಿ ಸಮರ್ಪಿಸಿದರು. ಮಧ್ಯಾಹ್ನ ಹಾಗೂ ರಾತ್ರಿ ಮಹಾ ಅನ್ನಸಂತರ್ಪಣೆ ಜರುಗಿತು.
ದೆಹಲಿಯ ಶಂಶು ಅಜ್ಜಿ ಅವರ ಸೇವಾರ್ಥವಾಗಿ ಶನಿವಾರ ಬೆಳಗ್ಗೆ ಲಲಿತಾ ಮಹಾ ಕದಳೀಯಾಗ ಜರುಗಿತು.
ಯಾವ ಶಕ್ತಿಯ ಆರಾಧನೆಯಲ್ಲಿ ಎಲ್ಲ ಶಕ್ತಿಗಳ ಆರಾಧನೆ ಅಡಗಿದೆಯೋ, ಯಾವ ಆರಾಧನೆಯಿಂದ ದೇಹದೊಳಗಿನ ಜೀವಕೋಶಗಳು ಚೈತನ್ಯ ಕಂಪಿಸುವುದೋ ಅಂತಹ ಭಾವನಾತ್ಮಕ ದಿವ್ಯಶಕ್ತಿಯೇ ಶ್ರೀಚಕ್ರ. ಅರ್ಚನೆಗೆ ಪ್ರಾಧಾನ್ಯವಿರುವ ಶ್ರೀಚಕ್ರ ಪೂಜೆಯಲ್ಲಿ 23 ಬಗೆಯ ವಿವಿಧ ಪುಷ್ಪಗಳನ್ನು ಅರ್ಚಿಸಿ 16 ಬಗೆಯ ನೈವೇದ್ಯವನ್ನಿಟ್ಟು ವಿಶೇಷವಾಗಿ ಆರಾಧನೆ ನೆರವೇರಿಸಲಾಯಿತು ಎಂದು ಶ್ರೀ ರಮನಾಂದ ಗುರೂಜಿ ತಿಳಿಸಿದ್ದಾರೆ.