ಉಡುಪಿ, ಮೇ 10: ಇತ್ತೀಚಿಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಾರ್ಯ ನಿರ್ವಹಿಸುತ್ತಿರುವ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೇ 9 ರಂದು ಪ್ರಥಮ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ನಡೆಸಲಾಯಿತು.
ಸಾಕಷ್ಟು ಜನೋಪಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರದಲ್ಲಿ ಪ್ರಸೂತಿ ತಜ್ಞೆ ಡಾ. ದೀಕ್ಷಿತಾ ಹಾಗೂ ಅರವಳಿಕೆ ತಜ್ಞ ಡಾ. ಅಜಿತ್ ಕುಮಾರ್ ಶೆಟ್ಟಿ ಯಶಸ್ವಿಯಾಗಿ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ನಡೆಸಿದರು. ಮಕ್ಕಳ ತಜ್ಞ ಡಾ. ಮಹಾಬಲ ಕೆ.ಎಸ್ ನವಜಾತ ಶಿಶುವಿನ ಯೋಗ ಕ್ಷೇಮ ನೋಡಿಕೊಂಡರು. ಶುಶ್ರೂಷಕಿಯರು ಹಾಗೂ ಇತರ ಸಿಬ್ಬಂದಿಗಳು ಸಹಕರಿಸಿದರು.
ಈ ಆಸ್ಪತ್ರೆಯಲ್ಲಿ ಈಗಾಗಲೇ ಸಂತಾನ ಹರಣ ಶಸ್ತ್ರಚಿಕಿತ್ಸಾ ಶಿಬಿರ ಯಶಸ್ವಿಯಾಗಿ ನಡೆಯುತ್ತಿದ್ದು, ಈಗ ಸಿಸೇರಿಯನ್ ಶಸ್ತ್ರ ಚಿಕಿತ್ಸೆಯೂ ಸಾಧ್ಯವಾಗಿರುವುದರಿಂದ ಮುಂದೆ ಬ್ರಹ್ಮಾವರದ ಸುತ್ತಮುತ್ತಲಿನ ಜನತೆ ಇದೊಂದು ಉತ್ತಮ ಹೆರಿಗೆ ಅಸ್ಪತ್ರೆಯಾಗಿ ಸೇವೆ ಸಲ್ಲಿಸುವಂತಾಗಿದೆ.
ಇದರೊಂದಿಗೆ ಆಸ್ಪತ್ರೆಯಲ್ಲಿ ದಂತ ತಜ್ಞರು, ದಂತ ವೈದ್ಯಕೀಯ ಎಕ್ಸರೇ ಸೌಲಭ್ಯ, ಮಕ್ಕಳ ತಜ್ಞರು, ಸಾಮಾನ್ಯ ಎಕ್ಸ್ರೇ ಸೌಲಭ್ಯ, ಅಸಾಂಕ್ರಾಮಿಕ ರೋಗಗಳ ವಿಭಾಗ, ಫಿಸಿಯೋಥೆರಪಿ ವಿಭಾಗ, ಸುಸಜ್ಜಿತ ಹಾಗೂ ಗುಣಮಟ್ಟದ ಸೌಲಭ್ಯಗಳಿರುವ, ನುರಿತ ತಂತ್ರಜ್ಞರಿರುವ ಪ್ರಯೋಗಾಲಯ ಮತ್ತಿತರ ಸೌಲಭ್ಯಗಳೂ ಲಭ್ಯವಿರುವುದರಿಂದ ಬ್ರಹ್ಮಾವರದ ಜನತೆಗೆ ತುಂಬಾ ಅನುಕೂಲಕರವಾಗಿದೆ.
ಈಗಾಗಲೇ ಬ್ರಹ್ಮಾವರ ತಾಲೂಕು ಘೋಷಣೆಯಾಗಿದ್ದು, ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರುವ ಎಲ್ಲಾ ಅರ್ಹತೆಗಳನ್ನು ಈ ಆಸ್ಪತ್ರೆ ಹೊಂದಿದ್ದು, ಕಾಯಕಲ್ಪ ಕಾರ್ಯಕ್ರಮದಲ್ಲಿ 18-19 ನೇ ಸಾಲಿಗೆ ಸ್ವಚ್ಚ ರತ್ನ ಪ್ರಶಸ್ತಿ ಗಳಿಸಿದ್ದು, 2019 -20 ನೇ ವರ್ಷದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ನಿಗದಿಪಡಿಸಿದ ರಾಷ್ಟ್ರೀಯ ಗುಣಮಟ್ಟ ಖಾತರಿ ಕಾರ್ಯಕ್ರಮದಲ್ಲೂ ಭಾಗವಹಿಸಿ ಅರ್ಹತೆಗಳಿಸಲು ಪ್ರಯತ್ನಿಸುತ್ತಿದೆ ಎಂದು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಪ್ರಕಟಣೆ ತಿಳಿಸಿದೆ.