ಉಡುಪಿ: ಉಡುಪಿ ಜಿಲ್ಲಾ ಉಪನ್ಯಾಸಕರ ವೇದಿಕೆ ಮತ್ತು ಕ್ರಿಯೇಟಿವ್ ಪ.ಪೂ.ಕಾಲೇಜು ಕಾರ್ಕಳ ಹಾಗೂ ತ್ರಿಷಾ ಪ.ಪೂ.ಕಾಲೇಜು ಉಡುಪಿ ಇವರ ಸಹಭಾಗಿತ್ವದಲ್ಲಿ 2022 ನೇ ಸಾಲಿನ ಭೌತಶಾಸ್ತ್ರ ಕಾರ್ಯಾಗಾರ ಉಡುಪಿ ಸಂತೆಕಟ್ಟೆ ತ್ರಿಷಾ ಪ.ಪೂ ಕಾಲೇಜಿನಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸರಕಾರಿ ಪ.ಪೂ.ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಆದಿತ್ಯ ರಾವ್, ಭೌತಶಾಸ್ತ್ರದಲ್ಲಿ ಫೋರ್ಸ್, ಟಾರ್ಕ್ ಹಾಗೂ ಆಂಗ್ಯುಲರ್ ಮುಮೆಂಟಮ್ ನ ಆಂತರಿಕ ಸಂಬಂಧದ ಬಗ್ಗೆ ವಿವಿಧ ಮಾಡೆಲ್ ಗಳ ಪ್ರಾತ್ಯಕ್ಷಿಕೆ ನೀಡಿ ಅದಕ್ಕೆ ಸಂಬಂಧಿಸಿದ ಉದಾಹರಣೆ ನೀಡಿ ಸವಿವರ ಮಾಹಿತಿ ನೀಡಿದರು.
ಕಲಿಕೋಪಕರಣಗಳ ಮೂಲಕ ಭೌತಶಾಸ್ತ್ರವನ್ನು ಅತ್ಯಂತ ಸರಳವಾಗಿ ಕಲಿಸಬಹುದು. ಭೌತಶಾಸ್ತ್ರ ಮನುಷ್ಯನ ಜೀವನದೊಂದಿಗೆ ಹಾಸುಹೊಕ್ಕಾಗಿದೆ ಎಂದು ವಿವೇಕ ಪ.ಪೂ.ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ರವಿ ಕಾರಂತ್ ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಆನ್ಲೈನ್ ಮೂಲಕ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಡಾ.ಗಣನಾಥ ಶೆಟ್ಟಿ, ಕಠಿಣ ವಿಷಯವೆನಿಸಿದ ಭೌತಶಾಸ್ತ್ರವನ್ನು ಇಂತಹ ಕಾರ್ಯಾಗಾರದ ಮುಖಾಂತರ ಪರಸ್ಪರ ಚರ್ಚಿಸಿ ಸರಳೀಕರಿಸಿ ವಿದ್ಯಾರ್ಥಿಗಳಿಗೆ ಬೋಧಿಸಲು ಅನುಕೂಲ ಆಗುತ್ತದೆ ಎಂದು ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ತ್ರಿಷಾ ಪ.ಪೂ.ಕಾಲೇಜಿನ ಪ್ರಾಂಶುಪಾಲ ಸ್ಟ್ಯಾನಿ.ಲೋಬೋ ಮಾತನಾಡಿ, ಪಠ್ಯ ಪುಸ್ತಕದ ವಿಚಾರಗಳನ್ನು ಕ್ರಿಯಾಶೀಲ ರೀತಿಯಲ್ಲಿ ಬೋಧಿಸುವಂತಾಗಬೇಕು. ಅದಕ್ಕಾಗಿ ಉಪನ್ಯಾಸಕರು ಪಠ್ಯದ ಬಗ್ಗೆ ಆಳವಾದ ಅಧ್ಯಯನ ಮತ್ತು ಪೂರ್ವ ತಯಾರಿ ನಡೆಸಿಯೇ ತರಗತಿಯಲ್ಲಿ ಪ್ರಸ್ತುತಪಡಿಸಬೇಕೆಂದು ಅಭಿಪ್ರಾಯ ಪಟ್ಟರು.
ಉಡುಪಿ ಜಿಲ್ಲಾ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆಯ ಗೌರವಾಧ್ಯಕ್ಷ ಲಕ್ಷ್ಮೀ ನಾರಾಯಣ ಛಾತ್ರ ಹಾಗೂ ಅಧ್ಯಕ್ಷ ವಿಘ್ನೇಶ್ವರ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಉಡುಪಿ ಜಿಲ್ಲೆಯ ವಿವಿಧ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರು ಕಾರ್ಯಾಗಾರದಲ್ಲಿ ಭಾಗವಹಿಸಿದರು.
ಉಡುಪಿ ಜಿಲ್ಲಾ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆಯ ಕಾರ್ಯದರ್ಶಿ ಉಮಾಪತಿ ಸಿ.ಎಸ್. ಸ್ವಾಗತಿಸಿದರು. ಕೋಶಾಧಿಕಾರಿ ಸದಾನಂದ ವಂದಿಸಿದರು. ಉಪನ್ಯಾಸಕ ಲೋಹಿತ್.ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು.