ಕೋವಿಡ್ ವೈರಸ್ ವಿರುದ್ಧ ಕ್ಷೀಣಿಸುತ್ತಿರುವ ಪ್ರತಿರಕ್ಷಣೆ: ಕೋವಿಡ್ ಬೂಸ್ಟರ್ ಡೋಸ್ ಅಗತ್ಯ ಎಂದ ಸರಕಾರ

ನವದೆಹಲಿ: ಕೋವಿಡ್ ವೈರಸ್ ವಿರುದ್ಧ ದೇಹದ ಪ್ರತಿರಕ್ಷಣೆ ಕ್ಷೀಣಿಸುತ್ತಿರುವುದರಿಂದ ಮುನ್ನೆಚ್ಚರಿಕಾ(ಬೂಸ್ಟರ್) ಡೋಸ್ ಅಗತ್ಯವಿದೆ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್‌ಟಿಜಿಐ) ಕೋವಿಡ್ -19 ವರ್ಕಿಂಗ್ ಗ್ರೂಪ್‌ನ ಮುಖ್ಯಸ್ಥ ಡಾ.ಎನ್.ಕೆ. ಅರೋರಾ ಹೇಳಿದ್ದಾರೆ.

ಎಐಆರ್ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವ ಕಾರಣ ಮುನ್ನೆಚ್ಚರಿಕಾ ಡೋಸ್ ನ ಪ್ರಮಾಣವನ್ನು ಮಿಷನ್ ಮೋಡ್‌ನಲ್ಲಿ ಹೆಚ್ಚಿಸಬೇಕು. ಕೋವಿಡ್ ಪ್ರಕರಣಗಳು ತಗ್ಗಿರುವುದರಿಂದ ಜನರ ಮನಸ್ಸಿನಲ್ಲಿ ಉದಾಸೀನತೆ ಮನೆಮಾಡಿದೆ. ಆದರೆ ನಾವು ರೋಗದ ವಿರುದ್ದ ಸಂಪೂರ್ಣ ರಕ್ಷಣೆ ಹೊಂದಿದ್ದೇವೆ ಎಂದು ಖಚಿತಪಡಿಸಿಕೊಳ್ಳಬೇಕು. ಎರಡನೇ ಡೋಸಿನ ಆರು ತಿಂಗಳ ರಕ್ಷಣೆಯನ್ನು ಇನ್ನೂ ಹೆಚ್ಚಿಸುವ ನಿಟ್ಟಿನಲ್ಲಿ ಬೂಸ್ಟರ್ ಡೋಸ್ ಅವಶ್ಯ ಎಂದು ಅವರು ಹೇಳಿದ್ದಾರೆ.

ಕೋವಿಡ್ ವೈರಸ್ ರೂಪಾಂತರ ಹೊಂದುತ್ತಿದ್ದು, ದಿನಕ್ಕೊಂದರಂತೆ ಉಪತಳಿಗಳು ಮುನ್ನಲೆಗೆ ಬರುತ್ತಿರುವುದು ಕೂಡಾ ಕೋವಿಡ್ ಪ್ರಕರಣಗಳು ಹೆಚ್ಚಲು ಕಾರಣವಾಗಿದ್ದು, ಬೂಸ್ಟರ್ ಡೋಸ್ ತೆಗೆದುಕೊಳ್ಳುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಿಸಲ್ಪಟ್ಟು ಸಂಭಾವ್ಯ ನಾಲ್ಕನೇ ಅಲೆಯನ್ನು ತಡೆಯಬಹುದು ಎನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ.