ಕೇರಳದ ಕಣ್ಣೂರಿನಲ್ಲಿ ಭಾರತದ ಎರಡನೇ ಮಂಕಿಪಾಕ್ಸ್ ಪ್ರಕರಣ ದೃಢ: ದ.ಕ ದಲ್ಲಿ ಹೈ ಅಲರ್ಟ್

ಮಂಗಳೂರು: ದ.ಕ ಜಿಲ್ಲೆಗೆ ತಾಗಿಕೊಂಡಿರುವ ಕೇರಳದಲ್ಲಿ ಭಾರತದ ಎರಡನೇ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದ್ದು, ದ.ಕ ಜಿಲ್ಲೆಯಲ್ಲಿ ರೋಗ ಹರಡುವ ಆತಂಕ ಎದುರಾಗಿದೆ. ಮೇ 13 ರಂದು ದುಬೈನಿಂದ ಕೇರಳಕ್ಕೆ ಬಂದ 31 ವರ್ಷದ ಕಣ್ಣೂರು ಮೂಲದ ವ್ಯಕ್ತಿಯೊಬ್ಬರಿಗೆ ವೈರಲ್ ಕಾಯಿಲೆ ಇರುವುದು ದೃಢಪಟ್ಟಿದೆ. ಕಣ್ಣೂರಿನ ಪರಿಯಾರಂ ವೈದ್ಯಕೀಯ ಕಾಲೇಜಿಗೆ ದಾಖಲಾಗಿರುವ ವ್ಯಕ್ತಿಯ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿಕೆ ನೀಡಿದ್ದಾರೆ. ರೋಗಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದವರ ಮೇಲೆ ನಿಗಾ ಇರಿಸಲಾಗಿದೆ.

ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಭಾರತಕ್ಕೆ ಆಗಮಿಸುವ ಅಂತರರಾಷ್ಟ್ರೀಯ ಪ್ರಯಾಣಿಕರ ಆರೋಗ್ಯ ತಪಾಸಣೆಯ ಕಾರ್ಯವನ್ನು ಕೇಂದ್ರ ಆರೋಗ್ಯ ಸಚಿವಾಲಯವು ಪರಿಶೀಲಿಸುತ್ತಿದೆ. ದೇಶದಲ್ಲಿ ಮಂಕಿಪಾಕ್ಸ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕಟ್ಟುನಿಟ್ಟಾದ ಆರೋಗ್ಯ ತಪಾಸಣೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ, ವಿಮಾನ ನಿಲ್ದಾಣ ಮತ್ತು ಬಂದರು ಆರೋಗ್ಯ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ.

ಮಂಕಿಪಾಕ್ಸ್‌ನ ಮೊದಲ ಪ್ರಕರಣ, ಜುಲೈ 14 ರಂದು ದಕ್ಷಿಣ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ವರದಿಯಾಗಿದೆ.

ದ.ಕ ಜಿಲ್ಲೆಯಲ್ಲಿ ಹೈ ಅಲರ್ಟ್:

ಜುಲೈ 13 ರಂದು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೇರಳದ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಮುತುವರ್ಜಿ ವಹಿಸಲಾಗುತ್ತಿದೆ. ದ.ಕ.ದಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ವಾರ್ಡ್ ಅನ್ನು ಮಂಕಿಪಾಕ್ಸ್ ಹೊಂದಿದ ರೋಗಿಗಳಿಗೆ ಮೀಸಲಿಡಲಾಗಿದೆ. ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.  ದಕ್ಷಿಣ ಕನ್ನಡದಲ್ಲಿ ಇದುವರೆಗೆ ಯಾವುದೇ ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿಲ್ಲ ಎಂದು ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ.ಜಗದೀಶ್ ತಿಳಿಸಿದ್ದಾರೆ.

ಕೊರೊನಾ ವೈರಸ್‌ನಂತೆ ಮಂಕಿಪಾಕ್ಸ್ ವೈರಸ್ ವೇಗವಾಗಿ ಹರಡುವ ಸಾಧ್ಯತೆ ತುಂಬಾ ಕಡಿಮೆ, ಆದಾಗ್ಯೂ ಸಾರ್ವಜನಿಕರು ಶುಚಿತ್ವದ ಕಡೆ ಗಮನಕೊಡುವುದು ಅತ್ಯಗತ್ಯವಾಗಿದೆ. ಮಂಕಿಪಾಕ್ಸ್ ರೋಗಿಗಳನ್ನು ಸ್ಪರ್ಶಿಸುವುದು, ರೋಗಿಗಳ ಜೊತೆ ನೇರ ಸಂಪರ್ಕ, ರೋಗಿಗಳ ವಸ್ತುಗಳನ್ನು ಉಪಯೋಗಿಸುವುದರಿಂದ ರೋಗ ಹರಡುವ ಸಾಧ್ಯತೆಗಳು ಹೆಚ್ಚಿರುತ್ತವೆ.