1975 ರ ತುರ್ತುಪರಿಸ್ಥಿತಿ ಘೋಷಣೆಯ ಮೇಲೆ ಆಧಾರಿತ ‘ಎಮರ್ಜೆನ್ಸಿ’ ಚಿತ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಣೌತ್ ಥೇಟ್ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯಂತೆಯೆ ಕಾಣಿಸಿಕೊಂಡಿದ್ದು, ಸಿನಿಪ್ರಿಯರ ಹುಬ್ಬೇರುವಂತೆ ಮಾಡಿದ್ದಾರೆ. ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನಾಧಾರಿತ ‘ತಲೈವಿ’ ಚಿತ್ರದಲ್ಲಿಯೂ ಪರಕಾಯ ಪ್ರವೇಶ ಮಾಡಿ ತನ್ನ ನಟನಾ ಕೌಶಲ್ಯದಿಂದ ಸಿನಿಪ್ರಿಯರನ್ನು ದಂಗುಬಡಿಸಿದ್ದರು ಕಂಗನಾ.
ಇಂಧಿರಾಗಾಂಧಿಯಂತೆ ಕಾಣಿಸಿಕೊಳ್ಳಲು ಆಸ್ಕರ್ ಪ್ರಶಸ್ತಿ ವಿಜೇತ ಸ್ಪೆಷಲ್ ಎಫೆಕ್ಟ್ ಮೇಕಪ್ ಕಲಾವಿದ ಡೇವಿಡ್ ಮಲಿನೋವ್ಸ್ಕಿ ಅವರನ್ನು ಕಂಗನಾ ನೇಮಿಸಿದ್ದಾರೆ. ಡೇವಿಡ್ ಮಲಿನೋವ್ಸ್ಕಿ ಆಸ್ಕರ್ ಪ್ರಶಸ್ತಿಯನ್ನು ಪಡೆದ ಡಾರ್ಕೆಸ್ಟ್ ಅವರ್ನಂತಹ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಅವರು ವರ್ಲ್ಡ್ ವಾರ್ ಝೆಡ್ ಮತ್ತು ದಿ ಬ್ಯಾಟ್ಮ್ಯಾನ್ ಗಳಲ್ಲಿ ಅದ್ಭುತ ಕೆಲಸ ಮಾಡಿದ್ದಾರೆ.
ಎಮರ್ಜೆನ್ಸಿ ಸಿನಿಮಾವನ್ನು ಕಂಗನಾ ನಿರ್ದೇಶಿಸಿ ನಿರ್ಮಿಸುತ್ತಿದ್ದು, ಈಗಾಗಲೇ ಇದರ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದ ಚಿತ್ರರಂಗದ ದಿಗ್ಗಜರು ಮತ್ತು ಸಿನಿಪ್ರಿಯರು ಕಂಗನಾ ಪರಕಾಯ ಪ್ರವೇಶಕ್ಕೆ ಭೇಷ್ ಎಂದಿದ್ದಾರೆ. ಚಿತ್ರದ ತಾರಾಗಣದಲ್ಲಿ ಅನುಪಮ್ ಖೇರ್, ಸತೀಶ್ ಕೌಶಿಕ್, ಶ್ರೇಯಸ್ ತಲಪಡೆ, ಭೂಮಿಕಾ ಚಾವ್ಲಾ ಮುಂತಾದ ಕಲಾವಿದರಿದ್ದಾರೆ ಎನ್ನಲಾಗಿದೆ.
KANGANA TO PORTRAY INDIRA GANDHI IN 'EMERGENCY': KANGANA TO DIRECT THE FILM… #KanganaRanaut to portray late #IndiraGandhi in her new film #Emergency… #Kangana is also producing and directing the film… #Emergency will be her second directorial venture after #Manikarnika. pic.twitter.com/WwDed8kYDm
— taran adarsh (@taran_adarsh) July 14, 2022
ನಿರ್ದೇಶಕಿಯಾಗಿ ಇದು ಕಂಗನಾರವರ ಎರಡನೇ ಸಿನಿಮಾ. ಇದಕ್ಕೂ ಮುನ್ನ ಝಾನ್ಸೀ ರಾಣಿ ಲಕ್ಷ್ಮೀಬಾಯಿ ಜೀವನಾಧಾರಿತ ‘ಮಣಿಕರ್ಣಿಕಾ’ ಸಿನಿಮಾವನ್ನು ನಿರ್ದೇಶಿಸಿ ನಟಿಸಿದ್ದರು. ಈಗ ತಮ್ಮ ಮಣಿಕರ್ಣಿಕಾ ಬ್ಯಾನರ್ ಅಡಿಯಲ್ಲಿ ಎಮರ್ಜೆನ್ಸಿ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ ಆದರೆ ಇದು 2023 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.