ಮುಂಬೈ: 18 ವರ್ಷ ಮೇಲ್ಪಟ್ಟ ನಾಗರಿಕರಿಗೆ ಶುಕ್ರವಾರದಿಂದ ಮುಂದಿನ 75 ದಿನಗಳವರೆಗೆ ಉಚಿತ ಕೋವಿಡ್-19 ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಬುಧವಾರ ಪ್ರಕಟಿಸಿದ್ದಾರೆ. ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ‘ಆಜಾದಿ ಕಾ ಅಮೃತ್ ಮಹೋತ್ಸವ’ ಅಂಗವಾಗಿ ಬೂಸ್ಟರ್ ಡೋಸ್ ಅಭಿಯಾನ ಅನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ.
ವಿಶೇಷ 75 ದಿನಗಳ ಅಭಿಯಾನದಡಿಯಲ್ಲಿ, 18 ರಿಂದ 59 ವಯಸ್ಸಿನ ಎಲ್ಲಾ ವಯಸ್ಕರಿಗೆ ಜುಲೈ 15 ರಿಂದ ಕೋವಿಡ್ -19 ಲಸಿಕೆಯ ಬೂಸ್ಟರ್ ಡೋಸ್ ಗಳನ್ನು ಉಚಿತವಾಗಿ ನೀಡಲಾಗುತ್ತದೆ.
ಸರ್ಕಾರದ ಈ ಕ್ರಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, “ಈ ನಿರ್ಧಾರವು ಕೋವಿಡ್-19ರ ವಿರುದ್ಧ ಭಾರತದ ಹೋರಾಟವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಸುರಕ್ಷತೆಯ ಹೆಚ್ಚುವರಿ ಪದರವನ್ನು ಸೇರಿಸುತ್ತದೆ. ಅರ್ಹರೆಲ್ಲರೂ ತಮ್ಮ ಬೂಸ್ಟರ್ ಡೋಸ್ ಅನ್ನು ಆದಷ್ಟು ಬೇಗ ಪಡೆಯಬೇಕೆಂದು ನಾನು ಒತ್ತಾಯಿಸುತ್ತೇನೆ” ಎಂದಿದ್ದಾರೆ.