ಉಡುಪಿ: ಅತಿವೃಷ್ಟಿ, ಪ್ರವಾಹದಿಂದ ಸಂಭವಿಸಿದ ಹಾನಿಯ ಕುರಿತು ಎಲ್ಲಾ ಜಿಲ್ಲೆಗಳಿಂದ ವರದಿ ಬಂದಿರುವ ಹಿನ್ನೆಲೆಯಲ್ಲಿ ತಕ್ಷಣವೇ ಹಾನಿಯಾದ ಮೂಲಸೌಕರ್ಯಗಳಿಗೆ ಅಂದರೆ ಆರ್.ಡಿ.ಪಿ.ಆರ್/ ಲೋಕೋಪಯೋಗಿ ರಸ್ತೆಗಳು , ವಿದ್ಯುತ್, ಸೇತುವೆ ದುರಸ್ತಿಗಾಗಿ 500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ರಜತಾದ್ರಿಯಲ್ಲಿ ಮಳೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಪರಿಶೀಲನೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಆಗಸ್ಟ್ ತಿಂಗಳಿನಲ್ಲಿ ಪುನಃ ಪರಿಶೀಲನೆ ಮಾಡಿ ಅಗತ್ಯಕ್ಕೆ ಅನುಸಾರವಾಗಿ ಹಣ ಬಿಡುಗಡೆ ಮಾಡಲಾಗುವುದು. ಪ್ರವಾಹವನ್ನು ಸಮರೋಪಾದಿಯಲ್ಲಿ ಎದುರಿಸಲು ಅಧಿಕಾರಿಗಳು, ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಜಿಲ್ಲಾಡಳಿತ ಹಾಗೂ ಶಾಸಕರು ಸನ್ನದ್ದ ರಾಗಿದ್ದೇವೆ. ಜನರ ಸಂಕಷ್ಟ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಕಳೆದ ವರ್ಷ ಒಂದು ತಿಂಗಳೊಳಗೆ 14 ಲಕ್ಷ ಹೆಕ್ಟೇರ್ ಗೆ 1600 ಕೋಟಿ ರೂ.ಗಳನ್ನು ರೈತರ ಬೆಳೆಗಳಿಗೆ ಪರಿಹಾರವನ್ನಾಗಿ ಬಿಡುಗಡೆ ಮಾಡಿತ್ತು. ಅದೇ ರೀತಿ ಈ ವರ್ಷವೂ ಕೂಡಲೇ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಗಳಿಂದ ವರದಿ ಹಾಗೂ ಅಂದಾಜು ಪಟ್ಟಿ ಬಂದ ನಂತರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದರು.
ಬೆಳೆ ಮತ್ತು ಮನೆ ಹಾನಿಗೆ ಪರಿಹಾರ:
ಈ ವರ್ಷ ಜುಲೈ ಮಾಹೆಯಲ್ಲಿ ಅತಿವೃಷ್ಟಿಯಾಗಿದೆ. ಕರಾವಳಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜೂನ್ ವರೆಗೂ ಸಾಮಾನ್ಯವಾಗಿದ್ದ ಮಳೆ ಜುಲೈನಲ್ಲಿ ವಾಡಿಕೆಗಿಂತ ಹೆಚ್ಚಾಗಿ ಸುರಿದಿದೆ. ಇಡೀ ರಾಜ್ಯದಲ್ಲಿ ಇದುವರೆಗೂ 32 ಜೀವ ಹಾನಿ, ಐದು ಜನರ ಕಣ್ಮರೆ, 34 ಜನರಿಗೆ ಗಾಯಗಳಾಗಿವೆ ಹಾಗೂ 300ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಿ ಉಳಿಸಲಾಗಿದೆ. 14 ಕಾಳಜಿ ಕೇಂದ್ರಗಳಿವೆ ಹಾಗೂ 4 ಎನ್.ಡಿ.ಆರ್.ಎಫ್ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಕೊಡಗು, ಬೆಳಗಾವಿ, ದಕ್ಷಿಣ ಕನ್ನಡ, ರಾಯಚೂರು ಜಿಲ್ಲೆಗಳಲ್ಲಿ ಈ ತಂಡಗಳು ಕೆಲಸ ಮಾಡುತ್ತಿವೆ. 4 ಎಸ್.ಡಿ.ಆರ್.ಎಫ್ ತಂಡಗಳು ಬೆಳಗಾವಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಜನ ಮೃತ ಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಸುಮಾರು 216 ಹೆಕ್ಟೇರ್ ಬೆಳೆ ಹಾನಿಯಾಗಿದೆ. 129 ಹೆಕ್ಟೇರ್ ಉಡುಪಿಯಲ್ಲಾಗಿದ್ದರೆ, ಉತ್ತರ ಕನ್ನಡದಲ್ಲಿ ಅಲ್ಪಪ್ರಮಾಣದಲ್ಲಾಗಿದೆ. ಕೃಷಿ ಮತ್ತು ತೋಟಗಾರಿಕೆಯ ಒಟ್ಟು 355 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ದಕ್ಷಿಣ ಕನ್ನಡದಲ್ಲಿ 429 ಮನೆಗಳು, ಉತ್ತರ ಕನ್ನಡ ಜಿಲ್ಲೆಯಲ್ಲಿ 437 ಮನೆಗಳು, ಉಡುಪಿಯಲ್ಲಿ 196 ಮನೆಗಳು ಹಾನಿಯಾಗಿವೆ. ಒಟ್ಟು 1062 ಮನೆಗಳು ಹಾನಿಗೊಳಗಾಗಿವೆ. ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿರುವ 58 ಮನೆಗಳು, 26 ತೀವ್ರ ಹಾನಿಗೊಳಗಾಗಿದ್ದು, ಅಲ್ಪ ಪ್ರಮಾಣದಲ್ಲಿ 1062 ಮನೆಗಳು ಹಾನಿಗೊಳಗಾಗಿವೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ರಸ್ತೆಗಳ ಹಾನಿ:
ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ರಸ್ತೆಗಳು ಸೇರಿ ದಕ್ಷಿಣ ಕನ್ನಡ- 727 ಕಿ.ಮಿ, ಉತ್ತರ ಕನ್ನಡ- 500 ಕಿ.ಮೀ, ಉಡುಪಿ- 960 ಕಿ.ಮೀ, ಒಟ್ಟು 2187 ಕಿ.ಮೀ ರಸ್ತೆ ಹಾನಿಗೊಳಗಾಗಿದೆ.
ಮೂರು ಜಿಲ್ಲೆಗಳಲ್ಲಿ 5595 ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಇವುಗಳನ್ನು ಪುನರ್ ಸ್ಥಾಪಿಸುವ ಕೆಲಸ ಭರದಿಂದ ಸಾಗಿದೆ. 422 ಟ್ರಾನ್ಸಫಾರ್ಮರ್ ಗಳ ದುರಸ್ತಿ ಕೆಲಸ ನಡೆದಿದೆ. 168 ಸೇತುವೆ ಮತ್ತು ಕನ್ವಲ್ಟ್ ಗಳು ಹಾನಿಯಾಗಿವೆ. ಮನೆ ಬಿದ್ದ ತಕ್ಷಣ ಎನ್.ಡಿ.ಆರ್. ಎಫ್ ನ 3200 ರೂ.ಗಳ ಜೊತೆ ರಾಜ್ಯ ಸರ್ಕಾರ 6800 ರೂ ಅಧಿಕವಾಗಿ ನೀಡಿ 10 ಸಾವಿರ ರೂ.ಗಳನ್ನು ಹಾನಿಯಾದ ಮನೆಗಳಿಗೆ ತಕ್ಷಣ ನೀಡಬೇಕೆಂದು ಆದೇಶ ಹೊರಡಿಸಿದೆ.
ಮನೆಹಾನಿಗೆ ಎ, ಬಿ, ಸಿ ವರ್ಗೀಕರಣ ಮಾಡಿ ‘ಎ’ ವರ್ಗಕ್ಕೆ ರೂ. 5 ಲಕ್ಷ, ಬಿ ವರ್ಗಕ್ಕೆ ರೂ. 3 ಲಕ್ಷ ರೂ.ಗಳು, ಅಲ್ಪ ಹಾನಿಯಾಗಿರುವ ಮನೆಗಳಿಗೆ 50 ಸಾವಿರ ರೂಗಳನ್ನು ನೀಡಲಾಗುವುದು. ಕೇಂದ್ರ ಸರ್ಕಾರ ಎ ವರ್ಗಕ್ಕೆ 95 ಸಾವಿರ ನೀಡಿದರೆ, ರಾಜ್ಯ ಸರ್ಕಾರ 4 ಲಕ್ಷ ಹೆಚ್ಚುವರಿಯಾಗಿ, ಬಿ ವರ್ಗಕ್ಕೆ 95 ಸಾವಿರ ನೀಡಿದರೆ ರಾಜ್ಯ ಸರ್ಕಾರ 3 ಲಕ್ಷ ಹೆಚ್ಚುವರಿಯಾಗಿ ಹಾಗೂ ಅಲ್ಪ ಹಾನಿಗೆ 5 ಸಾವಿರ ನೀಡಿದರೆ ರಾಜ್ಯವು 50 ಸಾವಿರ ರೂ.ಗಳನ್ನು ಹೆಚ್ಚುವರಿಯಾಗಿ ನೀಡುತ್ತಿದೆ ಎಂದರು.
ಕೃಷಿ ಇನ್ ಪುಟ್ ಸಹಾಯಧನ:
ಬೆಳೆ ಹಾನಿಗೆ ಕೃಷಿ ಇನ್ ಪುಟ್ ಸಹಾಯಧನವನ್ನು ಒಣ ಬೇಸಾಯಕ್ಕೆ ಎನ್.ಡಿ.ಆರ್.ಎಫ್ ಅಡಿ 6800 ರೂಗಳನ್ನು ನೀಡಲಾಗುತ್ತದೆ. ರಾಜ್ಯ ಸರ್ಕಾರ 6800 ರೂ ಸೇರಿಸಿ 13 ಸಾವಿರ ನೀಡುತ್ತಿದೆ. ಈ ವರ್ಷವೂ ಒಂದು ಹೆಕ್ಟೇರ್ ಗೆ 13,600 ರೂ.ಗಳ ಪರಿಹಾರ ಮುಂದುವರೆಸುತ್ತಿದ್ದೇವೆ. ನೀರಾವರಿ ಬೆಳೆಗಳಿಗೆ ಕೇಂದ್ರ ಸರ್ಕಾರ 13500 ರೂ ನೀಡಿದರೆ ರಾಜ್ಯ ಸರ್ಕಾರ 25 ಸಾವಿರ ನೀಡುತ್ತದೆ. ತೋಟಗಾರಿಕಾ ಬೆಳೆಗಳಿಗೆ ಕೇಂದ್ರ 18 ಸಾವಿರ ರೂ. ನೀಡಿದರೆ, ನಾವು 28 ಸಾವಿರ ನೀಡುತ್ತಿದ್ದೇವೆ. ಇದು ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ಹೆಚ್ಚುವರಿಯಾಗಿ ನೀಡುತ್ತಿದೆ ಎಂದರು.
ಕಾಳಜಿ ಕೇಂದ್ರ ಸ್ಥಾಪನೆ:
ಭಾರೀ ಮಳೆಯಿಂದಾಗಿ ಮೃತರಾದವರಿಗೆ ಕೇಂದ್ರ ಸರ್ಕಾರ 4 ಲಕ್ಷ ರೂ.ಗಳ ಪರಿಹಾರ ಮೊತ್ತ ನೀಡುತ್ತದೆ, ರಾಜ್ಯ ಸರ್ಕಾರ 5 ಲಕ್ಷ ರೂ.ಗಳನ್ನು ನೀಡುತ್ತಿದೆ. ಕಾಳಜಿ ಕೇಂದ್ರಗಳಿಗೆ ಕೆಲವರು ಬಂದರೆ, ಕೆಲವರು ಬರುವುದಿಲ್ಲ. ಈ ಬಾರಿ ಅವರಿಗೆ ನೀಡುವ ಆಹಾರದಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಮೊಟ್ಟೆ ನೀಡಲಾಗುತ್ತಿದೆ. ಸಂಬಂಧಿಕರ ಮನೆಗಳಲ್ಲಿ ಇರುವವರಿಗೆ ಆಹಾರ ಕಿಟ್ ನೀಡಲು ಆದೇಶ ನೀಡಲಾಗಿದೆ.
ಭೂಕಂಪನದ ಅಧ್ಯಯನ:
ಕೊಡಗು ಹಾಗೂ ಕರಾವಳಿಯಲ್ಲಿ ವಿಶೇಷ ಸಮಸ್ಯೆಗಳಿವೆ. ಭೂಕಂಪನದ ಅಧ್ಯಯನ ಮಾಡಲು ಜಿಯೋಗ್ರಾಫಿಕಲ್ ಸರ್ವೇ ಆಫ್ ಇಂಡಿಯಾ ಮತ್ತು ಬೆಂಗಳೂರು ಹಾಗೂ ಮೈಸೂರು ವಿ.ವಿ ಕಡೆಯಿಂದ ಸುದೀರ್ಘ ಅಧ್ಯಯನ ಮಾಡಿ, ಪರಿಹಾರ ಸೂಚಿಸಿ ವರದಿ ಸಲ್ಲಿಸಲು ಕೋರಲಾಗಿದೆ. ಪರಿಹಾರವಾಗಿ ರೆಟ್ರೋ ಫಿಟ್ಟಿಂಗ್ ಮಾಡಲು ಸಲಹೆ ನೀಡಿದ್ದು, ಅಂತಿಮ ವರದಿ ಸಲ್ಲಿಸಲು ಆದೇಶಿಸಲಾಗಿದೆ.
ಭೂ ಕುಸಿತ:
ಅಮೃತ ವಿ.ವಿ ಯವರು ಭೂ ಕುಸಿತ ತಡೆಯುವ ನಿಟ್ಟಿನಲ್ಲಿ ಕೊಡಗು ಭಾಗದಲ್ಲಿ ಕೆಲಸ ಪ್ರಾರಂಭಿಸಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೂಡ ಪಶ್ಚಿಮ ಘಟ್ಟಗಳಲ್ಲಿಯೂ ಅಧ್ಯಯನ ಕೈಗೊಳ್ಳುವಂತೆ ಆದೇಶ ನೀಡಲಾಗಿದೆ. ವರದಿಯಲ್ಲಿ ಸೂಚಿಸಿರುವ ಪರಿಹಾರಗಳ ಅನುಷ್ಠಾನಕ್ಕೆ ಸರ್ಕಾರ ಸಿದ್ಧವಿದೆ.
ಕಡಲ ಕೊರೆತ:
ಹಲವಾರು ವರ್ಷಗಳಿಂದ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರೂ, ಕಡಲ ಕೊರೆತ ನಿಂತಿಲ್ಲ. ಎಡಿಬಿ ಯೋಜನೆಯಡಿ 300 ಕೋಟಿ ರೂ.ಗಳನ್ನು ವೆಚ್ಚ ಮಾಡಿಲಾಗಿದೆ. 330 ಕಿಮೀ ಕಡಲ ತೀರದುದ್ದಕ್ಕೂ ಮಾಡಬೇಕಾಗಿದೆ. ಎಡಿಬಿ ಕೆಲಸದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ಮಂಗಳೂರಿನ ಉಳ್ಳಾಲ ಭಾಗದಲ್ಲಿ ಒಂದು ಕಿ.ಮೀ ವ್ಯಾಪ್ತಿಯಲ್ಲಿ ವೇವ್ ಬ್ರೇಕರ್ ಎಂಬ ಹೊಸ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಕೈಗೊಳ್ಳಲಾಗುವುದು. ಅದು ಯಶಸ್ವಿಯಾದರೆ ಇಡೀ ಕರಾವಳಿ ಭಾಗದಲ್ಲಿ ಅನುಷ್ಠಾನಕ್ಕೆ ತರುವ ಚಿಂತನೆ ಇದೆ. ಇದಕ್ಕಾಗಿ ಉನ್ನತ ಮಟ್ಟದ ಶಾಶ್ವತ ಸಮಿತಿ ರಚಿಸಲಾಗುವುದು. ಸಂಪೂರ್ಣ ಕರಾವಳಿಯ ಡಿಪಿಆರ್ ಸಿದ್ಧಪಡಿಸಿ ಬಾಹ್ಯ ಏಜೆನ್ಸಿಯ ಹಣಕಾಸಿನ ನೆರವಿನಿಂದ ಯೋಜನೆ ಕಾರ್ಯಗತಗೊಳಿಸಲಾಗುವುದು. ಡಿಪಿಆರ್ ಗೆ ಅಗತ್ಯ ವಿರುವ ಅನುದಾನ ಕೂಡಲೇ ಬಿಡುಗಡೆ ಮಾಡಲಾಗುವುದು. ವಿಸ್ತೃತ ಅಧ್ಯಯನವಾದ ಬಳಿಕ ಹಣಕಾಸಿನ ವ್ಯವಸ್ಥೆ ಮಾಡಲಾಗುವುದು.
ತಕ್ಷಣಕ್ಕೆ ತ್ರಿವಳಿ ಜಿಲ್ಲೆಗಳಿಗೆ ಎಸ್ ಡಿ ಆರ್ ಎಫ್ ಅಡಿ ಸಹಾಯ ಒದಗಿಸಿ ತಾತ್ಕಾಲಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದು ಎಂದರು. ಶಾಶ್ವತ ಪರಿಹಾರಕ್ಕೆ 2-3 ತಿಂಗಳಲ್ಲಿ ಯೋಜನೆ ರೂಪಿಸಲಾಗುವುದು. ಪ್ರತಿ ವರ್ಷ ಆಗುವ ಕಡಲ ಕೊರೆತ ತಡೆಯಲು ಜಿಲ್ಲಾಧಿಕಾರಿಗಳ ಹಂತದಲ್ಲಿ ಕೆಲವು ಕಾರ್ಯಕ್ರಮಗಳನ್ನು ನಿರಂತರವಾಗಿ ರೂಪಿಸಬೇಕು. ಇದಕ್ಕಾಗಿ ವಿಶೇಷ ಅನುದಾನವನ್ನು ಒದಗಿಸಲಾಗುವುದು. ಸಣ್ಣ ಪ್ರಮಾಣದ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ನೀಡಲಾಗುವುದು.
ಮುಂದಿನ ವಾರದಲ್ಲಿ ಕಾರವಾರ, ಬೆಳಗಾವಿ, ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಪ್ರವಾಸ ಮಾಡಲಿದ್ದು ಅಲ್ಲಿಯೂ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಉಡುಪಿ ಜಿಲ್ಲೆಯ ಮರವಂತೆ ಕಡಲ ಕಿನಾರೆಗೆ ಭೇಟಿ ನೀಡಿ ಕಡಲು ಕೊರೆತದ ಸ್ಥಳ ಪರಿಶೀಲನೆ ನಡೆಸಿದರು. ಈ ಕುರಿತು ಸ್ಥಳೀಯ ನಿವಾಸಿಗಳು ಹಾಗೂ ಮೀನುಗಾರರ ಜೊತೆ ಸಮಾಲೋಚನೆ ನಡೆಸಿ ಅವರಿಂದ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಘುಪತಿ ಭಟ್, ಸುಕುಮಾರ್ ಶೆಟ್ಟಿ ಮತ್ತು ಇತರರು ಉಪಸ್ಥಿರಿದ್ದರು.