ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜುಲೈ 21 ರಂದು ಏಜೆನ್ಸಿಯ ಮುಂದೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಹೊಸ ಸಮನ್ಸ್ ನೀಡಿದೆ. ಕೋವಿಡ್ -19 ರಿಂದ ಚೇತರಿಸಿಕೊಳ್ಳುವುದನ್ನು ಉಲ್ಲೇಖಿಸಿ ಸೋನಿಯಾ ಗಾಂಧಿ ಈ ಹಿಂದೆ ತನಿಖಾ ಸಂಸ್ಥೆಗೆ ಪತ್ರ ಬರೆದಿದ್ದರು. ಮೊದಲನೆ ನೋಟೀಸ್ ನೀಡಿದಾಗ ಸೋನಿಯಾ ಗಾಂಧಿಗೆ ಕೋವಿಡ್ ಪತ್ತೆ ಪರೀಕ್ಷೆಯಲ್ಲಿ ಸಂಕ್ರಮಣ ಇದೆ ಎಂದಾಗಿತ್ತು ಮತ್ತೆ ಆಕೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಆ ಬಳಿಕ ಜೂನ್ 23 ರಂದು ಹಾಜರಾಗಲು ನೀಡಿದ್ದ ಸಮನ್ಸ್ ಸಂದರ್ಭದಲ್ಲಿ, ವೈದ್ಯರು ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ ಎನ್ನುವ ಕಾರಣ ನೀಡಿ ಹಾಜರಾತಿಯನ್ನು ಮುಂದೂಡುವಂತೆ ಇಡಿ ಅನ್ನು ಸೋನಿಯಾ ಕೋರಿದ್ದರು. ವಿಚಾರಣೆಯನ್ನು ಮುಂದೂಡುವಂತೆ ಸೋನಿಯಾ ಮಾಡಿದ ಮನವಿಯನ್ನು ಜಾರಿ ನಿರ್ದೇಶನಾಲಯ ಒಪ್ಪಿಕೊಂಡಿದ್ದು, ಜುಲೈ ಕೊನೆಯ ವಾರದಲ್ಲಿ ಏಜೆನ್ಸಿಯೊಂದಿಗೆ ತನ್ನ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ಹೇಳಿತ್ತು. ಈಗ ಸೋನಿಯಾ ಗಾಂಧಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರುವುದರಿಂದ ಜುಲೈ 21 ರಂದು ಮತ್ತೆ ಇಡಿ ಮುಂದೆ ಹಾಜರಾಗಲು ಸಂಸ್ಥೆಯು ಮತ್ತೊಮ್ಮೆ ಸಮನ್ಸ್ ನೀಡಿದೆ.