ಜಿಲ್ಲಾ ಮಲೆಕುಡಿಯ ಸಂಘ: ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ

ಉಡುಪಿ: ಜಿಲ್ಲಾ ಮಲೆ ಕುಡಿಯ ಸಂಘದ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ, ವಿಶೇಷ ಮಹಾಸಭೆ ಹಾಗೂ ನೂತನ ಆಡಳಿತ ಮಂಡಳಿಯ ಪ್ರಥಮ ತ್ರೈಮಾಸಿಕ ಸಭೆಯು ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಇವರ ಅಧ್ಯಕ್ಷತೆಯಲ್ಲಿ ಇಂದು ಪೇರಡ್ಕದಲ್ಲಿರುವ ಸಂಘದ ಕಛೇರಿಯಲ್ಲಿ ಜರಗಿತು.

ನಿಕಟಪೂರ್ವ ಜಿಲ್ಲಾಧ್ಯಕ್ಷ ಗೋಪಾಲ್ ಗೌಡ ಎತ್ತಲ್ ಗುಡ್ಡೆ ಮತ್ತು ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಸಾಧು ಗೌಡ ನಾರ್ಜೆ ಹಾಗೂ ಆಡಳಿತ ಮಂಡಳಿ ಸದಸ್ಯರು ನೂತನ ಆಡಳಿತ ಮಂಡಳಿಗೆ ಸಂಘದ ಕಡತಗಳನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಸಂಘದ ಆಜೀವ ಸದಸ್ಯತ್ವ ಅಭಿಯಾನಕ್ಕೆ ಸಮುದಾಯದ ಹಿರಿಯ ಮುಖಂಡರಾದ ಗೋವಿಂದ ಗೌಡ ಮಾಳ ಮತ್ತು ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಈದು ಇವರು ದೀಪ ಪ್ರಜಲ್ವನೆ ಮಾಡಿ ಸದಸ್ಯತ್ವ ಸ್ವೀಕರಿಸುವ ಮೂಲಕ ಚಾಲನೆ ನೀಡಿದರು.

ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ತೆರಳಿ ಸದಸ್ಯತ್ವ ನೋಂದಣಿ ಮಾಡುವುದಾಗಿ ತೀರ್ಮಾನಿಸಲಾಗಿ, ಗ್ರಾಮಗಳ ಭೇಟಿಯ ದಿನಾಂಕ, ಸ್ಥಳ, ಸಮಯವನ್ನು ನಿಗದಿ ಪಡಿಸಲಾಯಿತು. ಆರ್ಥಿಕ ವರ್ಷದ 4 ತೈಮಾಸಿಕ ಸಭೆಗಳನ್ನು ತಿಂಗಳ 2ನೇ ಆದಿತ್ಯವಾರ ಆಯೋಜಿಸುವುದಾಗಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಸಮುದಾಯದ ಸಮಗ್ರ ಏಳಿಗೆ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಸಹಭಾಗಿತ್ವ ಸೇರಿದಂತೆ ಹಲವಾರು ವಿಚಾರಗಳ ಕುರಿತು ಸದಸ್ಯರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು.

ಸಭೆಯಲ್ಲಿ ನೂತನ ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ಗೀತಾ ಗೌಡ ಕಬ್ಬಿನಾಲೆ, ಸಂಘಟನಾ ಕಾರ್ಯದರ್ಶಿ ಸುಂದರ ಗೌಡ ರೆಂಜಾಳ, ಸಹ ಕಾರ್ಯದರ್ಶಿ ಶ್ರೀಮತಿ ಶೋಭ, ನಿಕಟಪೂರ್ವ ಕೋಶಾಧಿಕಾರಿ ವಿಷ್ಣುಮೂರ್ತಿ, ನೂತನ ವಕ್ತಾರ ದಿನೇಶ್ ಗೌಡ, ಸಹ ವಕ್ತಾರ ಮನೋಜ್, ಖಾಯಂ ಆಹ್ವಾನಿತ ಸದಸ್ಯರುಗಳು, ಸಲಹಾ ಸಮಿತಿ ಸದಸ್ಯರುಗಳು, ರಾಜ್ಯ ಸಂಘದ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ನೂತನ ಸದಸ್ಯರುಗಳು, ವಿವಿಧ ಗ್ರಾಮದ ಸಮಾಜ ಬಾಂಧವರು ಉಪಸ್ಥಿತರಿದ್ದರು.

ಕುಮಾರಿ ಯುಕ್ತಿ ಪ್ರಾರ್ಥಿಸಿ, ನೂತನ ಜಿಲ್ಲಾ ಕೋಶಾಧಿಕಾರಿ ಶ್ರೀಮತಿ ಸುಂದರಿ ಪೇರಡ್ಕ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಕೆರ್ವಾಶೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.