ಜನಸಂಖ್ಯಾ ಸ್ಪೋಟ: 2023 ರಲ್ಲಿ ಚೀನಾ ಹಿಂದಿಕ್ಕಿ ಅತಿ ಹೆಚ್ಚು ಜನಸಂಖ್ಯೆ ಹೊಂದುವ ರಾಷ್ಟ್ರವಾಗಲಿದೆ ಭಾರತ!

ನವದೆಹಲಿ: ವಿಶ್ವ ಜನಸಂಖ್ಯಾ ದಿನದಂದು ವಿಶ್ವಸಂಸ್ಥೆಯ ವರದಿಯ ಪ್ರಕಾರ ಭಾರತ ಮುಂದಿನ ವರ್ಷ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ ಎಂದು ಅಂದಾಜಿಸಲಾಗಿದೆ. 2022 ರ ನವೆಂಬರ್ ಮಧ್ಯದ ವೇಳೆಗೆ ವಿಶ್ವದ ಜನಸಂಖ್ಯೆಯು ಎಂಟು ಶತಕೋಟಿ ತಲುಪುವ ಮುನ್ಸೂಚನೆ ಇದೆ ಎಂದು ಸಂಸ್ಥೆಯು ಹೇಳಿದೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗ, ಜನಸಂಖ್ಯಾ ವಿಭಾಗದ ವರ್ಲ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟ್ಸ್ 2022, ಜಾಗತಿಕ ಜನಸಂಖ್ಯೆಯು ನವೆಂಬರ್ 15, 2022 ರಂದು ಎಂಟು ಬಿಲಿಯನ್ ತಲುಪಲಿದೆ ಎಂದು ಅಂದಾಜಿಸಿದೆ.

2022 ರಲ್ಲಿ ಚೀನಾದ 1.426 ಶತಕೋಟಿಗೆ ಹೋಲಿಸಿದರೆ, ಭಾರತದ ಜನಸಂಖ್ಯೆಯು 1.412 ಶತಕೋಟಿಯಷ್ಟಿದೆ. 2023 ರ ವೇಳೆಗೆ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಚೀನಾವನ್ನು ಹಿಂದಿಕ್ಕಲಿದೆ ಎಂದು ವರದಿ ಹೇಳಿದೆ. 2050 ರಲ್ಲಿ 1.668 ಶತಕೋಟಿ ಜನಸಂಖ್ಯೆಯನ್ನು ಭಾರತವು ಹೊಂದಿದ್ದರೆ, ಚೀನಾದ ಜನಸಂಖ್ಯೆಯು ಕೇವಲ 1.317 ಶತಕೋಟಿ ಇರಲಿದೆ ಎಂದು ಅಂದಾಜಿಸಲಾಗಿದೆ.