ನವೆಂಬರ್ 25, 1948 ರಂದು ಪ್ರಕೃತಿಯ ಒಡಲಲ್ಲಿ ಧರ್ಮದೇವತೆ ಶ್ರೀ ಮಂಜುನಾಥ ನೆಲೆಯಾದ ಪವಿತ್ರ ಭೂಮಿಯಲ್ಲಿ ಜನನ. ಕಡು ಕುಗ್ರಾಮವಾದ ಹಳ್ಳಿಯಲ್ಲಿ ಸೌಕರ್ಯಗಳೇ ಇಲ್ಲದಿದ್ದ ಕಾಲವದು. ಕುಡುಮ ಎಂಬ ಪುಟ್ಟ ಹಳ್ಳಿಯನ್ನು ಧರ್ಮಸ್ಥಳವಾಗಿಸಿ ದೇಶ ವಿದೇಶದ ಭಕ್ತ ಸಾಗರ ಶ್ರೀ ಕ್ಷೇತ್ರಕ್ಕೆ ಹರಿದು ಬರುವಂತೆ ಮಾಡಿದ ಕೀರ್ತಿ ಶ್ರೀಯುತ ವೀರೇಂದ್ರ ಹೆಗ್ಗಡಿಯವರಿಗಲ್ಲದೆ ಬೇರಾರಿಗೂ ಸಲ್ಲುವುದಿಲ್ಲ. ತಂದೆ ರತ್ನವರ್ಮ ಹೆಗ್ಗಡೆಯವರು ನಿಧನರಾದಾಗ ವೀರೇಂದ್ರ ಹೆಗ್ಗಡೆಯವರು ಇನ್ನೂ ಹದಿಹರೆಯದ ಹುಡುಗ. ಎಳವೆಯಲ್ಲೇ ಕ್ಷೇತ್ರದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತ ಇವರು ಇಳಿ ವಯಸ್ಸಿನಲ್ಲಿಯೂ ದಣಿವಿಲ್ಲದೆ ದುಡಿದು ಯುವಕರಿಗೆ ಮಾದರಿಯಾಗಿದ್ದಾರೆ.
ತನ್ನ 20ನೇ ವಯಸ್ಸಿನಲ್ಲಿಯೇ ಅನಿವಾರ್ಯ ಮತ್ತು ಆಕಸ್ಮಿಕ ಸಂದರ್ಭಗಳಿಂದಾಗಿ ಶ್ರೀಕ್ಷೇತ್ರ ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದರು. ಅಂದಿನಿಂದ ಇಂದಿಗೆ ಸುಮಾರು ಐದು ದಶಕಗಳು ಉರುಳಿ ಹೋದವು. ಹೇಗಿದ್ದ ಕುಡುಮ ಇಂದು ಹೇಗಾಗಿ ಹೋಗಿದೆ ಎಂದು ಜನರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ. ದೈವ ಸೇವೆಯ ಜೊತೆಗೆ ಸಮಾಜ ಸೇವೆಯನ್ನೂ ಕೈಗೊಂಡು ಧರ್ಮಸ್ಥಳದ ಕಾಯಾಕಲ್ಪವನ್ನೇ ಬದಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮುಖ್ಯವಾಗಿ ತಮ್ಮ ಗ್ರಾಮಾಭಿವೃದ್ದಿ ಯೋಜನೆಗಳ ಮೂಲಕ ಗ್ರಾಮೀಣ ಭಾಗದ ಜನರನ್ನು ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ಸಶಕ್ತೀಕರಣಗೊಳಿಸಿದ ಇವರ ಪ್ರಯತ್ನಕ್ಕೆ ಸ್ವತಃ ದೇಶದ ಪ್ರಧಾನಿಯೇ ನಮೋ ಎಂದಿದ್ದಾರೆ.
ಬೆಳ್ತಂಗಡಿಯೆಂಬ ಊರನ್ನು ಮದ್ಯ ಮುಕ್ತವನ್ನಾಗಿಸಿ ಪ್ರತಿಯೊಬ್ಬರ ಕೈಗೂ ಉದ್ಯೋಗ ನೀಡಿ ಆತ್ಮನಿರ್ಭರರನ್ನಾಗಿಸಿ ಯಶಸ್ವೀ ಧರ್ಮದರ್ಶಿ ಎಂದು ಹೆಸರುವಾಸಿಯಾಗಿರುವ, ಗ್ರಾಮದ ಸಂಪೂರ್ಣ ಅಭ್ಯುದಯಕ್ಕೆ ಕಾರಣೀಭೂತರಾದ, ಜನಮಾನಸದಲ್ಲಿ ಪೂಜ್ಯ ಖಾವಂದರೆಂದು ಪ್ರಸಿದ್ದಿ ಪಡೆದಿರುವ ಶ್ರೀಯುತರಿಗೆ ಒಲಿಯದ ಪ್ರಶಸ್ತಿಗಳೇ ಇಲ್ಲವೆನ್ನಬಹುದು.
2015 ರಲ್ಲಿ ಭಾರತ ಸರಕಾರ ಪದ್ಮವಿಭೂಷಣ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1993 ರಲ್ಲಿ ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾರಿಂದ ‘ರಾಜರ್ಷಿ’ ಗೌರವ, ಅನೇಕ ಧಾರ್ಮಿಕ ಮಠಗಳು ನೀಡುವ ‘ಧರ್ಮರತ್ನ’, ‘ಧರ್ಮಭೂಷಣ’, ‘ಅಭಿನವ ಚಾವುಂಡರಾಯ’, ‘ಪರೋಪಕಾರ ದುರಂಧರ’ ಮೊದಲಾದ ಬಿರುದುಗಳು, ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ‘ವರ್ಷದ ಕನ್ನಡಿಗ’ ಪ್ರಶಸ್ತಿ, ದೇವಿ ಅಹಲ್ಯಾಬಾಯಿ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ರತ್ನ, ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಲಂಡನ್ ನ ಪ್ರತಿಷ್ಠಿತ ‘ಆಶ್ಡೆನ್ ಸಂಸ್ಥೆಯು ನೀಡುವ ‘ಜಾಗತಿಕ ಹಸಿರು ಆಸ್ಕರ್’ ಎಂದೇ ಪರಿಗಣಿಸಲಾದ ‘ಆಶ್ಡೆನ್ ಸುಸ್ಥಿರ ಇಂಧನ ಕಾರ್ಯಕ್ರಮ ಪ್ರಶಸ್ತಿ’, ಖಾಸಗಿ ವಾಹಿನಿಯ ‘ಹೆಮ್ಮೆಯ ಕನ್ನಡಿಗ’ ಪ್ರಶಸ್ತಿ, ಏಷ್ಯಾ ವನ್ ಸಂಸ್ಥೆಯ ಏಷ್ಯಾದ ಶ್ರೇಷ್ಠ ನಾಯಕ ಮುಂತಾದ ಹತ್ತು ಹಲವು ಪ್ರಶಸ್ತಿಗಳನ್ನು ಹೆಗ್ಗಡೆಯವರ ಮುಡಿಗೇರಿದೆ.
ಡಾ.ವೀರೇಂದ್ರ ಹೆಗ್ಗಡೆ ಅವರ ತಾತ ಮಂಜಯ್ಯ ಹೆಗ್ಗಡೆ 1927ರಿಂದ 15 ವರ್ಷ ಕಾಲ ಮದ್ರಾಸ್ ಶಾಸನ ಸಭೆಯ ಸದಸ್ಯರಾಗಿದ್ದರು. ತಂದೆ ರತ್ನವರ್ಮ ಹೆಗ್ಗಡೆ 1957ರಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪ್ರಥಮ ಕಾಂಗ್ರೆಸ್ ಶಾಸಕರಾಗಿದ್ದರು. 1967ರಲ್ಲಿ ಕಾಪುವಿನಲ್ಲಿ ಅವರು ಕಾಂಗ್ರೆಸ್ನಿಂದ ಸ್ಪರ್ಧಿಸಿದರೂ ಗೆದ್ದಿರಲಿಲ್ಲ. ಅದಾದ ಆರು ದಶಕದ ಬಳಿಕ ಇದೀಗ ಡಾ.ವೀರೇಂದ್ರ ಹೆಗ್ಗಡೆ ರಾಜ್ಯಸಭೆಗೆ ನೇಮಕಗೊಂಡಿದ್ದಾರೆ. ಹೀಗಾಗಿ ತಂದೆ, ತಾತ ಹಾಕಿಕೊಟ್ಟ ರಾಜನೀತಿಯಲ್ಲಿ ಡಾ.ಹೆಗ್ಗಡೆಯವರು ಸಾಗುವುದು ಸುಲಭವಾಗಲಿದೆ.
ಇದೀಗ ದೇಶದ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಗೆ ಸದಸ್ಯರಾಗುವ ಮೂಲಕ ಹುಟ್ಟೂರಿನ ಕೀರ್ತಿಯನ್ನು ರಾಷ್ಟ್ರರಾಜಧಾನಿಯಲ್ಲಿಯೂ ಪಸರಿಸಿದ ಕೀರ್ತಿಗೆ ಶ್ರೀಯುತರು ಭಾಜನರಾಗಿದ್ದಾರೆ. ಪೂಜ್ಯರ ನೇತೃತ್ವದಲ್ಲಿ ಶ್ರೀಕ್ಷೇತ್ರ, ಸಮಸ್ತ ರಾಜ್ಯ ಮತ್ತು ದೇಶವು ಬೆಳವಣಿಗೆಯನ್ನು ಹೊಂದಲಿ. ಸಂಸತ್ತಿನಲ್ಲಿ ರಾಜ್ಯದ ಧ್ವನಿಯಾಗಲಿರುವ ಪೂಜ್ಯ ಖಾವಂದರಿಗೆ ಅಭಿನಂದನೆಗಳು.
-ಉಡುಪಿ ಎಕ್ಸ್ ಪ್ರೆಸ್