ಉಡುಪಿ : ಜಿಲ್ಲೆಯ ವಿಕಲಚೇತನರ ಶ್ರೇಯೋಭಿವೃದ್ದಿಗಾಗಿ, ಸಂಸದರ ಮತ್ತು ಶಾಸಕರ ನಿಧಿಯಲ್ಲಿ ಮೀಸಲಿಟ್ಟಿರುವ ಶೇ.5 ರಷ್ಟು ಅನುದಾನವನ್ನು ಸಂಪೂರ್ಣವಾಗಿ, ವಿಕಲಚೇತರಿಗೆ ಅಗತ್ಯವಿರುವ ವಿವಿಧ ಸೌಲಭ್ಯ ಒದಗಿಸಲು ಬಳಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಅವರು ಬುಧವಾರ, ಉಡುಪಿ ರೆಡ್ ಕ್ರಾಸ್ ಭವನದಲ್ಲಿ ನಡೆದ, ವಿಶ್ವ ರೆಡ್ ಕ್ರಾಸ್ ದಿನಾಚರಣೆ ಮತ್ತು ಕೃತಕ ಅವಯವಗಳ ಜೋಡಣಾ ಕೇಂದ್ರ ಉದ್ಘಾಟಿಸಿ, ವಿಕಲಚೇತನರಿಗೆ ಕೃತಕ ಅವಯವ ವಿತರಿಸಿ ಮಾತನಾಡಿದರು.
ವಿಶ್ವದಾದ್ಯಂತ ಮಾನವೀಯತೆಯ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ರೆಡ್ ಕ್ರಾಸ್ ಸಂಸ್ಥೆ ಇದುವರೆಗೆ ಮಾಡಿರುವ ಸೇವೆ ಮತ್ತು ಸಹಾಯ ವಿವರಿಸಲು ಸಾಧ್ಯವಿಲ್ಲ, ಸಮಾಜದಲ್ಲಿನ ದುರ್ಬಲ ವ್ಯಕ್ತಿಗಳ, ಮುಖ್ಯವಾಹಿನಿಯಿಂದ ದೂರ ಉಳಿದ ವ್ಯಕಿತ್ವಗಳ, ವಿಕಲಚೇತನರ ಅಭಿವೃದ್ದಿಗಾಗಿ ಸೇವೆ ಸಲ್ಲಿಸುತ್ತಿರುವ ರೆಡ್ ಕ್ರಾಸ್ ಸಂಸ್ಥೆಯ ಎಲ್ಲಾ ಕಾರ್ಯಗಳಿಗೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ಮತ್ತು ಅಗತ್ಯ ನೆರವು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಜಿಲ್ಲೆಯಲ್ಲಿ ಪ್ರಸ್ತುತ ಪ್ರಾರಂಭವಾಗಿರುವ ಕೃತಕ ಅವಯವಗಳ ಜೋಡಣಾ ಕೇಂದ್ರದಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ಉಚಿತವಾಗಿ ಕೃತಕ ಅವಯವಗಳನ್ನು ನೀಡಲಾಗುವುದು ಇತರರಿಗೆ ರಿಯಾಯತಿ ದರದಲ್ಲಿ ನೀಡಲಾಗುವುದು, ಜಿಲ್ಲೆಯ ವಿಕಲಚೇತರಿಗೆ ಸೌಲಭ್ಯ ಒದಗಿಸಲು ಸಂಸದರ ಮತ್ತು ಶಾಸಕರ ನಿಧಿಯಲ್ಲಿ ಮೀಸಲಿಟ್ಟಿರುವ ಶೇ.5 ರಷ್ಟು ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡಲಾಗುವುದು ಎಂದು ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಘಟಕದಲ್ಲಿ ಗುರುತಿಸಲಾದ 7 ಫಲಾನುಭವಿಗಳಿಗೆ ಕೃತಕ ಅವಯವಗಳನ್ನು ಜಿಲ್ಲಾಧಿಕಾರಿ ವಿತರಿಸಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆ ನ್ಯಾಶನಲ್ ಹೆಡ್ಕ್ವಾಟರ್ಸ್, ನವದೆಹಲಿಯ ಮ್ಯಾನೆಜಿಂಗ್ ಕಮಿಟಿ ಮೆಂಬರ್ ಬಸ್ರೂರು ರಾಜೀವ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕ್ವಿಜ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಪ್ರೋಗ್ರಾಮ್ ಆಫೀಸರ್ಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ವಿಕಲಚೇತನ ಅಧಿಕಾರಿ ನಿರಂಜನ ಭಟ್, ರೆಡ್ ಕ್ರಾಸ್ ಉಡುಪಿ ಘಟಕದ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ರೆಡ್ ಕ್ರಾಸ್ ಉಡುಪಿ ಘಟಕದ ಉಪ ಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ ಸ್ವಾಗತಿಸಿದರು, ಗೌರವ ಖಜಾಂಜಿ ಟಿ. ಚಂದ್ರಶೇಖರ್ ವಂದಿಸಿದರು. ಜಯರಾಮ ಆಚಾರ್ಯ ನಿರೂಪಿಸಿದರು.