ಉಡುಪಿ: ಕಳೆದ 7 ವರ್ಷಗಳಿಂದ ಅನೇಕ ಸಾಮಾಜಿಕ ಕಾರ್ಯಗಳನ್ನು ಹಾಗೂ ಪ್ರಕಲ್ಪಗಳನ್ನು ನಡೆಸುತ್ತಿರುವ ಸ್ವಯಂ ಸೇವಾ ಸಂಘಟನೆ ಸಂಚಲನ ಸಂಸ್ಥೆಯು ಇದೀಗ ದೇಶದ ಅಗ್ರಮಾನ್ಯ ಲಾಜಿಸ್ಟಿಕ್ಸ್ ಸಂಸ್ಥೆಯಾದ ಅಲ್ ಕಾರ್ಗೋ ಲಾಜಿಸ್ಟಿಕ್ಸ್ ಪ್ರೈ ಲಿ ಸಂಸ್ಥೆಯ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಉಡುಪಿ-ದ.ಕ ಜಿಲ್ಲೆಗಳ ಯುವಕ ಯುವತಿಯರಿಗೆ ಉದ್ಯೋಗಾವಕಾಶ ಸೃಷ್ಟಿಸಲು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಂತೆ ಸಂಚಲನ ಸಂಸ್ಥೆಯು ತನ್ನ ತರಬೇತು ಪಾಲುದಾರ ಸಂಸ್ಥೆ ಹಾಗೂ ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ದಿ ಪಡೆದಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿ ಮೂಲಕ ಜಿಲ್ಲೆಯ 60 ಯುವಕ-ಯುವತಿಯರಿಗೆ ಮುಂದಿನ 2 ತಿಂಗಳು ಬಿ ಎಫ್ ಎಸ್ ಐ ಕ್ಷೇತ್ರದ ಪರಿಣಿತರಿಂದ 3 ಸ್ಪೆಷಲೈಸೇಷನ್ ಗಳಲ್ಲಿ ಸಂಪೂರ್ಣ ಉಚಿತ ತರಬೇತಿ ನೀಡಿ ನಂತರ ಉದ್ಯೋಗಾವಕಾಶವನ್ನು ಒದಗಿಸಲಿದೆ.
ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಜಿಲ್ಲೆಯ ಅಂತಿಮ ಪದವಿ ಓದುತ್ತಿರುವ ಅಥವಾ ಮುಗಿಸಿರುವ 30 ವರ್ಷ ಕೆಳಗಿನ ಅಭ್ಯರ್ಥಿಗಳು https://forms.gle/YbGvZokVRNo1USjH7 ಮೂಲಕ ಜುಲೈ 4, 2022ರೊಳಗೆ ನೋಂದಾಯಿಸಿಕೊಳ್ಳಬಹುದು. ಹೀಗೆ ನೋಂದಾಯಿಸಿಕೊ0ಡ ಅಭ್ಯರ್ಥಿಗಳ ಆಯ್ಕೆಯನ್ನು ಜುಲೈ 5 ಮತ್ತು 6 ರಂದು ಅವರ ಶೈಕ್ಷಣಿಕ ಅರ್ಹತೆ, ಪಠ್ಯೇತರ ಚಟುವಟಿಕೆ, ಸಾಮಾಜಿಕ ಕಾರ್ಯ ಹಾಗೂ ಗ್ರಾಮೀಣ/ಆರ್ಥಿಕ ಹಿನ್ನಲೆಯನ್ನು ಪರಿಶೀಲಿಸಿ ಅಂತಿಮಗೊಳಿಸಲಿದೆ. ಅಂತಿಮವಾಗಿ ಆಯ್ಕೆಯಾದ 60 ಅಭ್ಯರ್ಥಿಗಳಿಗೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬಹುಬೇಡಿಕೆಯ ಕೆ ವೈ ಸಿ-ಎ ಎಂ ಎಲ್, ಕಸ್ಟಮರ್ ಸರ್ವಿಸ್ ಆಂಡ್ ಬ್ಯಾಂಕಿಂಗ್ ಸ್ಟಾಂಡರ್ಡ್ ಕೋಡ್ ಮತ್ತು ಡಿಜಿಟಲ್ ಬ್ಯಾ0ಕಿಂಗ್ ವಿಷಯಗಳಲ್ಲಿ ಉಚಿತ ತರಬೇತಿ ನೀಡಿ ನಂತರ ಉದ್ಯೋಗ ಮೇಳದ ಮೂಲಕ ಉತ್ತಮ ಉದ್ಯೋಗಾವಕಾಶ ಒದಗಿಸಲಾಗುವುದು. ಈ ಯೋಜನೆಯ ಸದುಪಯೋಗವನ್ನು ಜಿಲ್ಲೆಯ ಅಭ್ಯರ್ಥಿಗಳು ಪಡೆದುಕೊಂಡು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬೇಕಾಗಿ ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ, ನಿರ್ದೇಶಕಿ ಶ್ರೀಮತಿ ಪೌರ್ಣಮಿ ಪ್ರೇಮ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.