ಇರಾನ್ ನಲ್ಲಿ 6.0 ತೀವ್ರತೆಯ ಭೂಕಂಪ: ಕನಿಷ್ಟ ಮೂರು ಜನ ಸಾವು; ಎಂಟು ಮಂದಿ ಗಾಯಾಳು

ಇರಾನ್‌ನ ಹಾರ್ಮೋಜ್‌ಗನ್ ಪ್ರಾಂತ್ಯದ ಬಂದರ್ ಇ ಖಮೀರ್‌ನಿಂದ 33 ಕಿಮೀ ನಲ್ಲಿ ಬೆಳಗ್ಗೆ 3:02 ಘಂಟೆಗೆ 6.0 ತೀವ್ರತೆಯ ಭೂಕಂಪ ದಾಖಲಾಗಿದೆ. ಕಂಪನದ ಅನುಭವ ಬಹ್ರೇನ್, ಸೌದಿ ಅರೇಬಿಯಾ, ಇರಾನ್, ಓಮನ್, ಪಾಕಿಸ್ತಾನ, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಅಫ್ಘಾನಿಸ್ತಾನದವರೆಗೂ ಅನುಭವವಾಗಿದೆ. ರಾತ್ರಿ ಸಂಭವಿಸಿದ 6.1 ಮತ್ತು 6.3 ತೀವ್ರತೆಯ ಸತತ ಎರಡು ಭೂಕಂಪಗಳ ನಂತರ ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿವೆ.

ಶನಿವಾರ ಮುಂಜಾನೆ ದಕ್ಷಿಣ ಇರಾನ್‌ನಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದಿಂದಾಗಿ ಕನಿಷ್ಠ ಮೂರು ಜನ ಸಾವನ್ನಪ್ಪಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರದ ಪ್ರಕಾರ, ಭೂಕಂಪವು 10 ಕಿ.ಮೀ ಆಳದಲ್ಲಿ ಸಂಭವಿಸಿದೆ. ಭೂಕಂಪದಿಂದಾಗಿ ಎಂಟು ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಭೂಕಂಪವು ಹಾರ್ಮೋಜ್ಗಾನ್ ಪ್ರಾಂತ್ಯದ ಬಂದರು ನಗರವಾದ ಬಂದರ್ ಅಬ್ಬಾಸ್‌ನಿಂದ 100 ಕಿಲೋಮೀಟರ್ ನೈಋತ್ಯಕ್ಕೆ ಅಪ್ಪಳಿಸಿದೆ ಎಂದು ಅಮೇರಿಕಾದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಭೂಕಂಪದ ನಂತರ ಆ ಪ್ರದೇಶದಲ್ಲಿ ಭೀತಿ ಆವರಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಬಹ್ರೇನ್ ಮತ್ತು ಕತಾರ್‌ನಲ್ಲಿಯೂ ಕಂಪನದ ಅನುಭವವಾಗಿದೆ. ಯುಎಇ ಮತ್ತು ಇತರ ಪ್ರದೇಶಗಳ ನೆಟ್ಟಿಗರು ಭೂಕಂಪದ ಸಮಯದಲ್ಲಿ ನಡುಗುವ ಕಟ್ಟಡಗಳ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.

ಕಳೆದ ವಾರವಷ್ಟೆ ಅಫಘಾನಿಸ್ತಾನದಲ್ಲಿಯೂ 6.0 ತೀವ್ರತೆಯ ಭೂಕಂಪ ದಾಖಲಾಗಿದ್ದು, ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು ಮತ್ತು ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿತ್ತು.