ಕಾರ್ಕಳ: ಮೂರು ಮಾರ್ಗದ ಬಳಿ ಬಸ್ ನಿಲುಗಡೆ ಪುನರ್ ಸ್ಥಾಪಿಸುವಂತೆ ಪುರಸಭಾ ಸದಸ್ಯ ಶುಭದರಾವ್ ಒತ್ತಾಯ

ಕಾರ್ಕಳ: ಇಲ್ಲಿನ ವಿದ್ಯಾ ಸಂಸ್ಥೆಗಳಾದ ಕ್ರೈಸ್ಟ್ ‌ಕಿಂಗ್ ಪದವಿ ಪೂರ್ವಕಾಲೇಜು, ಶ್ರೀ ಭುವನೇಂದ್ರ ಹೈಸ್ಕೂಲ್ ಮತ್ತು ಎಸ್.ವಿ. ಟಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಬಸ್ ಮೂಲಕ ಆನೆಕೆರೆ – ಮೂರು ಮಾರ್ಗವಾಗಿ ಸಂಚರಿಸುತ್ತಿದ್ದು, ಮೂರು‌ ಮಾರ್ಗದ ಬಳಿ ಇರುವ ಪೆಟ್ರೋಲ್ ಪಂಪ್ ಬಳಿ ಇಳಿದು ಕಾಲೇಜುಗಳಿಗೆ ತೆರಳುತ್ತಿದ್ದರು‌. ಈ ನಿಲುಗಡೆಯಿಂದಾಗಿ ವಿದ್ಯಾರ್ಥಿಗಳಿಗೆ ಶಾಲೆ-ಕಾಲೇಜುಗಳಿಗೆ ತೆರಳಲು ಅನುಕೂಲವಾಗುತ್ತಿತ್ತು.

ಆದರೆ ಈಗ ಪುರಸಭೆಯಲ್ಲಿ ಯಾವುದೇ ಚರ್ಚೆ ನಡೆಸದೆ ಪೆಟ್ರೋಲ್ ಪಂಪ್ ಬಳಿ ಬಸ್ ಗಳನ್ನು ನಿಲ್ಲಿಸಲು ಏಕಾಏಕಿ ನಿರ್ಬಂಧ ಹೇರಿದ ಪರಿಣಾಮ ವಿದ್ಯಾರ್ಥಿಗಳೆಲ್ಲರೂ ಅನಿವಾರ್ಯವಾಗಿ ಬಸ್ ನಿಲ್ದಾಣದವರೆಗೆ ತೆರಳಿ ಅಲ್ಲಿ ಇಳಿದು ಕಾಲೇಜುಗಳಿಗೆ ತೆರಳಬೇಕಾದ ಅನಿವಾರ್ಯತೆ ಉಂಟಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಕ್ಲಪ್ತ ಸಮಯಕ್ಕೆ ತರಗತಿಗೆ ತೆರಳಲು ಅನಾನುಕೂಲಗಳಾಗುತ್ತಿವೆ.

ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿಯೂ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಹಾಗಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೊದಲಿದ್ದ ಸಂಚಾರ ವ್ಯವಸ್ಥೆಯನ್ನೇ ಮುಂದುವರೆಸಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನಾನುಕೂಲಗಳಿಗೆ ಪರಿಹಾರ ಒದಗಿಸಿಕೊಡುವಂತೆ ಪುರಸಭಾ ಸದಸ್ಯ ಶುಭದರಾವ್ ಕಾರ್ಕಳ ಪುರಸಭೆ ಮತ್ತು ಪೋಲೀಸ್ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.