2023 ರಲ್ಲಿ ಜಿ-20 ಶೃಂಗ ಸಭೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆಯೋಜನೆ

ಜಮ್ಮು: ವಿಶ್ವದ ಪ್ರಮುಖ ಆರ್ಥಿಕ ದೇಶಗಳ ಪ್ರಭಾವಿ ಗುಂಪಾದ ಜಿ-20 ಯ 2023 ನೇ ಸಾಲಿನ ಸಭೆಗಳನ್ನು ಜಮ್ಮು ಮತ್ತು ಕಾಶ್ಮೀರವು ಆಯೋಜಿಸಲಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯಲಿರುವ ಜಿ-20 ಸಭೆಗಳ ಒಟ್ಟಾರೆ ಸಮನ್ವಯಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಸರ್ಕಾರವು ಐದು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಿದೆ.

ಸೆಪ್ಟೆಂಬರ್ 2021ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಜಿ-20 ಸಭೆಗೆ ಭಾರತದ ಶೆರ್ಪಾ ಆಗಿ ನೇಮಿಸಲಾಯಿತು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಭಾರತವು ಡಿಸೆಂಬರ್ 1, 2022 ರಿಂದ ಜಿ-20 ಅಧ್ಯಕ್ಷತೆಯನ್ನು ವಹಿಸುತ್ತದೆ ಮತ್ತು 2023 ರಲ್ಲಿ ಮೊದಲ ಜಿ- 20 ನಾಯಕರ ಶೃಂಗಸಭೆಯನ್ನು ಆಯೋಜಿಸಲಿದೆ.

2014 ರಿಂದೀಚೆಗೆ ಜಿ-20 ಶೃಂಗಸಭೆಗಳಲ್ಲಿ ಭಾರತದ ಪ್ರಾತಿನಿಧ್ಯದ ನೇತೃತ್ವವನ್ನು ಪ್ರಧಾನಿ ಮೋದಿ ವಹಿಸಿದ್ದಾರೆ.

ಜಿ-20 ದೇಶಗಳಲ್ಲಿ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಜರ್ಮನಿ, ಫ್ರಾನ್ಸ್, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಟರ್ಕಿ, ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿವೆ.