ನವದೆಹಲಿ: ಹೊಸದಾಗಿ ಘೋಷಿಸಲಾದ ಅಗ್ನಿಪಥ್ ಯೋಜನೆಯಡಿ ಭಾರತೀಯ ವಾಯುಪಡೆಗೆ (ಐಎಎಫ್) ಮೊದಲ ನೇಮಕಾತಿ ಜೂನ್ 24 ರಂದು ಪ್ರಾರಂಭವಾಗಲಿದೆ ಎಂದು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಶುಕ್ರವಾರ ತಿಳಿಸಿದ್ದಾರೆ.
ಈ ಯೋಜನೆಯು ದೇಶದ ಯುವಕರಿಗೆ ಪ್ರಯೋಜನವನ್ನು ನೀಡುವ ಜೊತೆಗೆ ಸಶಸ್ತ್ರ ಪಡೆಗಳಿಗೆ ಸೇರುವ ಮೂಲಕ ಅವರು ದೇಶಕ್ಕೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಚೌಧರಿ ಹೇಳಿದ್ದಾರೆ.
ಅಗ್ನಿಪಥ್ ಯೋಜನೆಯ ವಿವರಗಳ ಕುರಿತು ಸೈನ್ಯವನ್ನು ಉದ್ದೇಶಿಸಿ ಮಾತನಾಡಲು ಅವರು ಇಂದು ಆರು ಫಾರ್ವರ್ಡ್ ಬೇಸ್‌ಗಳಿಗೆ ಭೇಟಿ ನೀಡಲಿದ್ದಾರೆ. ಈ ಯೋಜನೆಯ ವಿವರಗಳನ್ನು ಸೇನಾ ಪಡೆಯಲ್ಲಿರುವ ಎಲ್ಲರಿಗೂ ವಿವರಿಸುವುದು ಇದರ ಗುರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2022ರ ಡಿಸೆಂಬರ್ ವೇಳೆಗೆ ಭೂ- ಸೇನೆಗೆ ಅಗ್ನಿವೀರ್‌ಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ, ಸೇನೆಯಲ್ಲಿ ಅವರ ಸಕ್ರಿಯ ಸೇವೆಯು 2023 ರ ಮಧ್ಯದಲ್ಲಿ ಪ್ರಾರಂಭವಾಗುತ್ತದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ತಿಳಿಸಿದ್ದಾರೆ.
“ಅಗ್ನಿವೀರ್‌ಗಳಾಗಿ ಭಾರತೀಯ ಸೇನೆಗೆ ಸೇರಲು ಈ ಅವಕಾಶವನ್ನು ಬಳಸಿಕೊಳ್ಳುವಂತೆ ನಾವು ನಮ್ಮ ಯುವಕರಿಗೆ ಕರೆ ನೀಡುತ್ತೇವೆ. ಈ ನಿರ್ಧಾರವು ನಮ್ಮ ಅನೇಕ ಯುವ, ಶಕ್ತಿಯುತ ಮತ್ತು ದೇಶಭಕ್ತ ಯುವಕರಿಗೆ ಅವಕಾಶವನ್ನು ಒದಗಿಸುತ್ತದೆ, ಅವರು ಕೋವಿಡ್-19 ಸಾಂಕ್ರಾಮಿಕದ ಹೊರತಾಗಿಯೂ, ಸೇನೆ ಸೇರಲು ತಯಾರಿ ನಡೆಸುತ್ತಿದ್ದಾರೆ. ಕೋವಿಡ್ ನಿರ್ಬಂಧಗಳಿಂದಾಗಿ ಕಳೆದ ಎರಡು ವರ್ಷಗಳಲ್ಲಿ ನೇಮಕಾತಿ ರಾಲಿಗಳನ್ನು ಪೂರ್ಣಗೊಳಿಸಲಾಗಲಿಲ್ಲ” ಎಂದು ಪಾಂಡೆ ಹೇಳಿದ್ದಾರೆ.