ಆರೋಗ್ಯ ಸೇವೆಯಲ್ಲಿ ರಕ್ತ ವರ್ಗಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ. ನಿರ್ದಿಷ್ಟವಾಗಿ ಮಹಿಳೆಯರು ಮತ್ತು ಮಕ್ಕಳನ್ನು ರಕ್ತದ ಕೊರತೆ ಕಾಡುತ್ತದೆ. ಭಾರತಕ್ಕೆ ಹಲವಾರು ವೈದ್ಯಕೀಯ ಅಸ್ವಸ್ಥತೆಗಳ ಚಿಕಿತ್ಸೆಗಾಗಿ ಸುಮಾರು 5 ಕೋಟಿ ಯೂನಿಟ್‌ಗಳಷ್ಟು ರಕ್ತದ ಬೃಹತ್ ಅವಶ್ಯಕತೆ ಇರುತ್ತದೆ. ಪೂರೈಕೆ ಮತ್ತು ಬೇಡಿಕೆಗಳ ನಡುವಿನ ಅಂತರ ಬಹುತೇಕ ಅರ್ಧದಷ್ಟು ಇದೆ. ವಾಸ್ತವವಾಗಿ ಪ್ರತಿ ಎರಡು ಸೆಕೆಂಡುಗಳಿಗೊಮ್ಮೆ ದೇಶದ ಯಾವುದೋ ಒಂದು ಸ್ಥಳದಲ್ಲಿ ರಕ್ತ ವರ್ಗಾವಣೆಯ ಅವಶ್ಯಕತೆ ಇರುತ್ತದೆ. ಅಂದರೆ ಪ್ರತಿ ದಿನ 35,000ಕ್ಕೂ ಹೆಚ್ಚಿನ ರಕ್ತದಾನಗಳ ಅಗತ್ಯವಿರುತ್ತದೆ ಎಂದು ಇದು ಸೂಚಿಸುತ್ತದೆ.
ಪ್ರತಿ ವರ್ಷ ಸುಮಾರು 30 ದಶಲಕ್ಷಕ್ಕೂ ಹೆಚ್ಚಿನ ರಕ್ತದ ಭಾಗಗಳನ್ನು ವರ್ಗಾವಣೆ ಮಾಡಲಾಗುತ್ತದೆ. ಮಾನವನ ರಕ್ತಕ್ಕೆ ಯಾವುದೇ ಬದಲಿ ವಸ್ತು ಇಲ್ಲ ಎಂಬುದನ್ನು ನಾವು ಮನಸ್ಸಿನಲ್ಲಿಡಬೇಕಿದೆ. ಅಗತ್ಯವಿರುವ ರಕ್ತವನ್ನು ಸ್ವಯಂಸೇವಕರು ದಾನ ಮಾಡುವ ಅವಶ್ಯಕತೆ ಇರುತ್ತದೆ. ಅಗತ್ಯವಿರುವ ರೋಗಿಗಳಿಗೆ ರಕ್ತದ ಉತ್ಪನ್ನಗಳು ಲಭ್ಯವಾಗುವಂತೆ ಮಾಡಲು ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ನೀಡುವುದು ಮುಖ್ಯವಾಗಿರುತ್ತದೆ. 18ರಿಂದ 65 ವರ್ಷ ವಯಸ್ಸಿನ ಮತ್ತು ಕನಿಷ್ಟ 50 ಕಿಲೋಗಳಷ್ಟು ತೂಕ ಹೊಂದಿರುವ ವ್ಯಕ್ತಿಗಳು ಒಂದು ವರ್ಷದಲ್ಲಿ ಕನಿಷ್ಟ ಆರು ಬಾರಿ ರಕ್ತದಾನ ಮಾಡಬಹುದು. ರಕ್ತದಾನಗಳ ನಡುವೆ ಎರಡು ತಿಂಗಳ ಅಂತರ ಪಾಲಿಸುವುದು ನಿಯಮವಾಗಿರುತ್ತದೆ.
ಪ್ಲೇಟ್ಲೇಟ್‌ಗಳನ್ನು ವರ್ಷದಲ್ಲಿ 24 ಬಾರಿಯವರೆಗೆ ದಾನವಾಗಿ ನೀಡಬಹುದಲ್ಲದೆ, ಪ್ರತಿ 7 ದಿನಕ್ಕೊಮ್ಮೆ ದಾನ ಮಾಡಬಹುದು. ಆರ್‌ಸಿಬಿಗಳನ್ನು ಪ್ರತಿ 112 ದಿನಗಳಿಗೊಮ್ಮೆ, ಒಂದು ವರ್ಷಕ್ಕೆ ಮೂರು ಬಾರಿಯವರೆಗೆ ದಾನ ಮಾಡಬಹುದು. ಶಿಫಾರಸ್ಸು ಮಾಡಲಾದ ಸಂಖ್ಯೆಗಿಂತಲೂ ಹೆಚ್ಚಿನ ಬಾರಿ ರಕ್ತದಾನ ಮಾಡಿದಲ್ಲಿ, ರಕ್ತಹೀನತೆ ಉಂಟಾಗುವ ದೊಡ್ಡ ಅಪಾಯ ಇರುತ್ತದೆ. ಇದರಿಂದಾಗಿ ವ್ಯಕ್ತಿಯ ರಕ್ತದಲ್ಲಿ ಸಾಕಷ್ಟು ಕೆಂಪು ರಕ್ತಕಣಗಳು ಇರುವುದಿಲ್ಲ. ಇದು ಮತ್ತಷ್ಟು ಸಂಕೀರ್ಣ ತೊಂದರೆಗಳಿಗೆ ದಾರಿ ಮಾಡಿಕೊಡಬಹುದು.
“ಓ” ಪಾಸಿಟಿವ್ ಮತ್ತು “ಎ” ಪಾಸಿಟಿವ್ ವಿಧಗಳು ಅತ್ಯಂತ ಸಾಮಾನ್ಯವಾದ ರಕ್ತದ ವಿಧಗಳಾಗಿರುತ್ತವೆ. ಆದ್ದರಿಂದ ಅತ್ಯಂತ ಹೆಚ್ಚು ಬಾರಿ ಇವುಗಳನ್ನು ದಾನ ಮಾಡುವ ಅಗತ್ಯವಿರುತ್ತದೆ. ಈ ದಾನಿಗಳಲ್ಲಿ ಸಂಪೂರ್ಣ ರಕ್ತದಾನಗಳಿಗೆ ಅತ್ಯಂತ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತದೆ. ಈ ರಕ್ತವನ್ನು ಮೂರು ಬೇರೆ ಬೇರೆ ರಕ್ತದ ಭಾಗಗಳಾಗಿ ಪ್ರತ್ಯೇಕಿಸಬಹುದು ಮತ್ತು ಅವುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಬಹುದು. ರೋಗಿಗಳಲ್ಲಿ ಮೂರು ಪ್ರಮುಖ ರಕ್ತದ ಉತ್ಪನ್ನಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಫ್ರೆಶ್ ಫ್ರೋಜನ್ ಪ್ಲಾಸ್ಮಾ(ಘನೀಕರಿಸಿದ ಪ್ಲಾಸ್ಮಾ), ಪ್ಲೇಟ್ಲೇಟ್‌ಗಳು(ಎರಡು ವಿಧಗಳು-ಎಸ್‌ಡಿಪಿ -ಸಿಂಗಲ್ ಡೋನರ್ ಪ್ಲೇಟ್ಲೇಟ್ ಮತ್ತು ಆರ್‌ಡಿಪಿ-ರ‍್ಯಾಂಡಮ್ ಡೋನರ್ ಪ್ಲೇಟ್ಲೇಟ್) ಮತ್ತು ಪ್ಯಾಕ್ ಮಾಡಲಾದ ಕೆಂಪು ರಕ್ತ ಕಣಗಳು ಸೇರಿರುತ್ತವೆ.
ದಾನಿಯೊಬ್ಬರಿಂದ ರಕ್ತವನ್ನು ಸಂಗ್ರಹಿಸಿದಾಗ ಆರಂಭದಲ್ಲಿ ಅದನ್ನು ಸಾಂಕ್ರಾಮಿಕ ರೋಗಗಳಿಗಾಗಿ ಪರೀಕ್ಷಿಸಲಾಗುತ್ತದೆ. ದಾನ ನೀಡಲಾದ ರಕ್ತ ಸೂಕ್ತವಾಗಿದ್ದಲ್ಲಿ ಅದನ್ನು ಪ್ರತ್ಯೇಕ ಪ್ಲಾಸ್ಮಾ, ಪ್ಲೇಟ್ಲೇಟ್‌ಗಳು ಮತ್ತು ಆರ್‌ಬಿಸಿಗಳಾಗಿ ಪ್ರತ್ಯೇಕಿಸುವ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಇವುಗಳನ್ನು ಮುಂದೆ ಬಳಸಿಕೊಳ್ಳುವುದು ಮತ್ತು ವರ್ಗಾವಣೆ ಮಾಡುವುದು ನಡೆಯುತ್ತದೆ. ಆದ್ದರಿಂದ ಒಂದು ರಕ್ತದಾನ ಮೂರು ಜೀವಗಳನ್ನು ಉಳಿಸಬಲ್ಲದು.
ರಕ್ತದಾನ ಮಾಡುವ ಮುನ್ನ ಕನಿಷ್ಟ ಏಳು ಗಂಟೆಗಳಷ್ಟು ರಾತ್ರಿಯ ಒಳ್ಳೆಯ ನಿದ್ರೆ ಮತ್ತು ಸಾಕಷ್ಟು ನೀರು ಸೇವಿಸುವ ಸಲಹೆಯನ್ನು ನೀಡಲಾಗುತ್ತದೆ. ಮದ್ಯಪಾನ ಮತ್ತು ರಕ್ತದಲ್ಲಿ ಕೊಬ್ಬಿನ ಅಂಶವನ್ನು ಹೆಚ್ಚಿಸುವ ಆಹಾರಗಳ ಸೇವನೆಯನ್ನು ತಪ್ಪಿಸಬೇಕು. ಏಕೆಂದರೆ ರಕ್ತದಲ್ಲಿನ ಕೊಬ್ಬಿನ ಪ್ರಮಾಣ ಉನ್ನತ ಪ್ರಮಾಣದಲ್ಲಿದ್ದರೆ, ಸೋಂಕು ರೋಗಗಳನ್ನು ಪತ್ತೆ ಮಾಡಲು ಸಾಧ್ಯವಾಗದಿರಬಹುದು.
ಕಬ್ಬಿಣಾಂಶ ಹೊಂದಿರುವ ಪೂರಕ ಆಹಾರಗಳು ಅಥವಾ ಉನ್ನತ ಪ್ರಮಾಣದ ವಿಟಮಿನ್ ಸಿ ಹೊಂದಿರುವ ಆಹಾರ ಪದಾರ್ಥಗಳಾದ ದಪ್ಪ ಮೆಣಸಿನಕಾಯಿ(ಕ್ಯಾಪ್ಸಿಕಂ), ಸ್ಟ್ರಾಬೆರ‍್ರಿ, ನೆಲ್ಲಿಕಾಯಿ ಮುಂತಾದವುಗಳನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಇವುಗಳು ದೇಹದಲ್ಲಿ ಕಬ್ಬಿಣಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತವೆ. ರಕ್ತದಾನ ಮಾಡಿದ ನಂತರ ಈ ಆಹಾರಗಳನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಏಕೆಂದರೆ ರಕ್ತದಾನದ ಕಾರಣವಾಗಿ ಕೆಂಪು ರಕ್ತ ಕಣಗಳ ಸಂಖ್ಯೆ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ. ಮತ್ತು ಹಿಮೋಗ್ಲೋಬಿನ್ ಮಟ್ಟಗಳು ಕಡಿಮೆಯಾಗುತ್ತವೆ.
ಎ, ಬಿ, ಎಬಿ ಮತ್ತು ಓ ಸೇರಿದಂತೆ ನಾಲ್ಕು ಮುಖ್ಯವಾದ ರಕ್ತದ ಪ್ರಕಾರಗಳಿವೆ. ಭಾರತದಲ್ಲಿ ಓ ಪ್ರಕಾರ ಅತ್ಯಂತ ಸಾಮಾನ್ಯ ರಕ್ತದ ಪ್ರಕಾರವಾಗಿದ್ದು, ನಂತರದ ಸ್ಥಾನ ಬಿ ಪ್ರಕಾರದ್ದಾಗಿರುತ್ತದೆ. ಜನರಲ್ಲಿ ಶೇ.7ರಷ್ಟು ಮಾತ್ರ ಓ ನೆಗೆಟೀವ್ ರಕ್ತದ ಪ್ರಕಾರ ಇರುತ್ತದೆ. ಈ ರೀತಿಯ ರಕ್ತದ ಮಾದರಿ ಹೊಂದಿರುವ ಇಂತಹವರನ್ನು ಪ್ಲಾಸ್ಮಾದ ಯುನಿವರ್ಸಲ್ ಬ್ಲಡ್ ಡೋನರ್ಸ್ ಎನ್ನಲಾಗುತ್ತದೆ. ಇವರು ತಮ್ಮ ರಕ್ತವನ್ನು ಯಾವುದೇ ರಕ್ತದ ಗುಂಪಿನವರಿಗೆ ನೀಡಬಹುದಾಗಿರುತ್ತದೆ. ಶೇ. 0.4 ರಷ್ಟು ಜನರಲ್ಲಿ ಮಾತ್ರ ಎಬಿ ನೆಗೆಟಿವ್ ರಕ್ತದ ಪ್ರಕಾರ ಇರುತ್ತದೆ. ಇವರು ಪ್ಲಾಸ್ಮಾದ ಯುನಿವರ್ಸಲ್ ಡೋನರ್ಸ್ ಗಳಾಗಿದ್ದು, ಇದನ್ನು ದೊಡ್ಡ ಪ್ರಮಾಣದ ರಕ್ತ ವರ್ಗಾವಣೆಯ ಅಗತ್ಯವಿರುವ ರೋಗಿಗಳಿಗೆ ಆಗಾಗ್ಗೆ ಬಳಸಲಾಗುತ್ತದೆ.
ಬಹಳಷ್ಟು ರಕ್ತದ ಅವಶ್ಯಕತೆ ಇರುವವರಿಗೆ ಮತ್ತು ರಕ್ತದಾನ ಮಾಡುವ ವ್ಯಕ್ತಿಗಳಿಗೆ ಇಬ್ಬರಿಗೂ ರಕ್ತದಾನ ಒಳ್ಳೆಯದಾಗಿರುತ್ತದೆ. ರಕ್ತದಲ್ಲಿ ಕಬ್ಬಿಣಾಂಶ ಹೆಚ್ಚಾಗಿ ಶೇಖರಣೆಯಾಗುವ ಅಪಾಯವನ್ನು ರಕ್ತದಾನ ಕಡಿಮೆ ಮಾಡುತ್ತದೆ ಅಲ್ಲದೆ, ಹೃದಯ ಮತ್ತು ಪಿತ್ತಜನಕಾಂಗಗಳ ಕಾರ್ಯಗಳನ್ನು ಸುಧಾರಿಸುತ್ತದೆ. ಆದ್ದರಿಂದ ರಕ್ತದಾನವನ್ನು ಒಂದು ನಿಯಮವನ್ನಾಗಿ ಪಾಲಿಸಿರಿ.
-ಡಾ. ಎನ್.ಜಿ. ಕಂಚನ್, ಫಿಜಿಷಿಯನ್ ಮತ್ತು ಮಧುಮೇಹ ತಜ್ಞರು, ಸ್ಪೆಷಲಿಸ್ಟ್ ಹಾಸ್ಪಿಟಲ್