ಉಡುಪಿ: ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗೆ ಈಗಾಗಲೇ ಕೈಗೊಂಡಿರುವ ಕ್ರಮಗಳ ಜೊತೆಗೆ ಇನ್ನಷ್ಟು ಹೆಚ್ಚಿನ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಕೇಂದ್ರದ ರಕ್ಷಣಾ ಸಚಿವಾಲಯದ ನಿರ್ದೇಶಕ ಪೀಯುಷ್ ರಂಜನ್ ಹೇಳಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ, ಜಿಲ್ಲೆಯಲ್ಲಿ ಜಲಶಕ್ತಿ ಅಭಿಯಾನ ಯೋಜನೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮಳೆ ನೀರು ಕೊಯ್ಲು, ಕೆರೆಗಳ ಅಭಿವೃದ್ಧಿ, ಚೆಕ್ ಡ್ಯಾಂ ನಿರ್ಮಾಣ, ಪ್ಲಾಂಟೇಶನ್, ಇಂಗು ಗುಂಡಿಗಳ ರಚನೆ, ಜಲ ಮೂಲಗಳ ಸಂರಕ್ಷಣೆ ಕುರಿತಂತೆ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು, ನಗರ ಪ್ರದೇಶದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವಾಗ ಮಳೆ ನೀರು ಕೊಯ್ಲು ಘಟಕ ಅಳವಡಿಕೆ ಬಗ್ಗೆ ಸೂಚಿಸುವ ಕಡ್ಡಾಯ ನಿಯಮಗಳ ಪಾಲನೆ ಆಗುತ್ತಿರುವ ಬಗ್ಗೆ ಕಟ್ಟುನಿಟ್ಟಿನ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಜಲಶಕ್ತಿ ಅಭಿಯಾನದ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅನುಷ್ಠಾನಗೊಳಿಸುವಂತೆ ಹಾಗೂ ಅಂತರ್ಜಲ ವೃದ್ಧಿಯ ಪ್ರಯೋಜನಗಳ ಕುರಿತಂತೆ ಹೆಚ್ಚಿನ ಸಂಖ್ಯೆಯ ಸಾರ್ವಜನಿಕ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಹಾಗೂ ತ್ಯಾಜ್ಯ ನೀರಿನ ಸಮರ್ಪಕ ಬಳಕೆ ಮಾಡುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಜಿಲ್ಲೆಯಲ್ಲಿ 1400 ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟುಗಳ ಮೂಲಕ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಉದ್ಯೋಗ ಖಾತ್ರಿ ಯೋಜನೆಯಡಿ ಕರೆಗೆಳ ಅಭಿವೃದ್ಧಿ ಹಾಗೂ ತೆರೆದ ಬಾವಿಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಈ ಹಿಂದೆ ಜಿಲ್ಲೆಯಲ್ಲಿ 180 ಅಡಿಯ ಕೆಳಗೆ ನೀರು ದೊರೆಯುತ್ತಿದ್ದು, ಪ್ರಸ್ತುತ ಈ ಪ್ರಮಾಣ 160 ಅಡಿಗಳಿಗೆ ತಲುಪಿದೆ ಎಂದರು.
ಸಭೆಯಲ್ಲಿ ಕೇಂದ್ರದ ಜಲಶಕ್ತಿ ಅಭಿಯಾನ ಯೋಜನೆಯ ವಿಜ್ಞಾನಿ ಹಾಗೂ ತಾಂತ್ರಿಕ ಅಧಿಕಾರಿ ಡಾ.ಲಕ್ಷ್ಮೀ ನಾರಾಯಣ್ ತುಕಾರಾಲ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.