ನವದೆಹಲಿ: ಇದೇ ಮೊದಲ ಬಾರಿಗೆ, ಭಾರತೀಯ ನೋಟುಗಳ ಮೇಲೆ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಮತ್ತು ಭಾರತದ 11 ನೇ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ವಾಟರ್ಮಾರ್ಕ್ಗಳನ್ನು ಪರಿಚಯಿಸಲು ಆರ್ಬಿಐ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ.
ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ ವರದಿಯ ಪ್ರಕಾರ, ಆರ್ಬಿಐ ಜೊತೆಗೆ ಹಣಕಾಸು ಸಚಿವಾಲಯವು ಶೀಘ್ರದಲ್ಲೇ ಭಾರತದ ಶ್ರೇಷ್ಠ ಬರಹಗಾರರಲ್ಲಿ ಒಬ್ಬರಾದ ಟ್ಯಾಗೋರ್ ಮತ್ತು ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಕಲಾಂ ಅವರ ಚಿತ್ರವುಳ್ಳ ವಾಟರ್ಮಾರ್ಕ್ ಅನ್ನು ಕೆಲವು ಮುಖಬೆಲೆಯ ನೋಟುಗಳ ಹೊಸ ಸರಣಿಯಲ್ಲಿ ಪರಿಚಯಿಸುವ ಬಗ್ಗೆ ಚರ್ಚೆ ನಡೆಸುವ ಸಂಭವಗಳಿವೆ ಎನ್ನಲಾಗಿದೆ.
ಆರ್ಬಿಐ ಮತ್ತು ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್ಪಿಎಂಸಿಐಎಲ್) ಮೂರು ಪ್ರಮುಖ ವ್ಯಕ್ತಿಗಳ ವಾಟರ್ಮಾರ್ಕ್ಗಳನ್ನು ಒಳಗೊಂಡ ಎರಡು ವಿಭಿನ್ನ ಮಾದರಿ ಸೆಟ್ಗಳನ್ನು ಐಐಟಿ-ದೆಹಲಿ ಎಮೆರಿಟಸ್ ಪ್ರೊಫೆಸರ್ ದಿಲೀಪ್ ಟಿ ಶಹಾನಿ ಅವರಿಗೆ ಕಳುಹಿಸಿದೆ ಎಂದು ವರದಿ ಹೇಳಿದೆ. ಎರಡು ಮಾದರಿ ಸೆಟ್ ಗಳಿಂದ ಒಂದನ್ನು ಆಯ್ಕೆ ಮಾಡಲು ಪ್ರಾಧ್ಯಾಪಕರನ್ನು ಕೇಳಲಾಗಿದ್ದು, ಇದರಲ್ಲಿ ಆಯ್ಕೆಯಾದ ಸೆಟ್ ಅನ್ನು ಅಂತಿಮ ಪರಿಗಣನೆಗೆ ಸರ್ಕಾರದ ಮುಂದೆ ಮಂಡಿಸಲಾಗುವುದು.
ಒಂದು ಅಥವಾ ಎಲ್ಲಾ ಮೂರು ವಾಟರ್ಮಾರ್ಕ್ ಅನ್ನು ಆಯ್ಕೆ ಮಾಡುವ ಅಂತಿಮ ನಿರ್ಧಾರವನ್ನು ‘ಉನ್ನತ ಮಟ್ಟದಲ್ಲಿ’ ತೆಗೆದುಕೊಳ್ಳಲಾಗುತ್ತದೆ. ಇಲ್ಲಿಯವರೆಗೆ, ಯಾವುದೇ ನಿರ್ದಿಷ್ಟ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎನ್ನಲಾಗಿದೆ.