ಮಂಡ್ಯ: ಹಿಂದೂ ಸಂಘಟನೆಗಳು ಶನಿವಾರ ಕರೆ ನೀಡಿರುವ “ಮೂಲಮಂದಿರ ಚಲೋ” ಅಭಿಯಾನದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇಂದು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಸೆಕ್ಷನ್ 144 ಸಿಆರ್ಪಿಸಿ ಜಾರಿಯಾಗಿದ್ದು, ಜಾಮಿಯಾ ಮಸೀದಿಯ ಆವರಣದ ಸುತ್ತ ಬಿಗಿ ಭದ್ರತೆ ನಿಯೋಜಿಸಲಾಗಿದೆ.
ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಎಂದು ಹೇಳಲಾಗುತ್ತಿರುವ ಜಾಮಿಯಾ ಮಸೀದಿಯಲ್ಲಿ ಪೂಜೆಗೆ ಅವಕಾಶ ನೀಡಬೇಕೆಂದು ಹಿಂದೂ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ. ಈ ಹಿನ್ನೆಲೆಯಲ್ಲಿ “ಮೂಲಮಂದಿರ ಚಲೋ” ಎನ್ನುವ ಅಭಿಯಾನವನ್ನು ಕೈಗೊಂಡಿವೆ.
ಪಟ್ಟಣದ ಕುವೆಂಪು ವೃತ್ತದಿಂದ ಜಾಮಿಯಾ ಮಸೀದಿವರೆಗೆ ಮೆರವಣಿಗೆ ನಡೆಸಲು ಹಿಂದೂ ಸಂಘಟನೆಗಳು ಮುಂದಾಗಿದ್ದು, ಪೂಜೆಗೆ ಅವಕಾಶ ನೀಡಬೇಕೆಂದು ಕೇಳಿಕೊಂಡಿವೆ. ಅಲ್ಲದೆ ಮದರಸ ಕಾರ್ಯಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮೆರವಣಿಗೆ ನಡೆಯುವ ಮಾರ್ಗದುದ್ದಕ್ಕೂ ಪೊಲೀಸರನ್ನು ನಿಯೋಜಿಸಲಾಗಿದೆ.
500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, 4 ಚೆಕ್ ಪೋಸ್ಟ್ ಗಳನ್ನು ಅಳವಡಿಸಲಾಗಿದೆ. ಎಸ್ಪಿ ಎನ್ ಯತೀಶ್ ಸಮ್ಮುಖದಲ್ಲಿ ಮೆರವಣಿಗೆ ನಡೆಸಲಾಗುತ್ತದೆ.
ಶನಿವಾರ ನಡೆಯುವ ವಾರದ ಸಂತೆಯನ್ನು ಮುಂದೂಡಲಾಗಿದೆ, ಇಂದು ಶ್ರೀರಂಗಪಟ್ಟಣದ 5 ಕಿಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಮಸೀದಿ ರಸ್ತೆ ಬಂದ್, ಮಸೀದಿಗೆ ಪ್ರವೇಶವಿಲ್ಲ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಅನುಮಾನಾಸ್ಪದ ಚಲನವಲನಗಳ ನಿಗಾ ವಹಿಸಲು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಶ್ವತಿ ಎಸ್. ತಿಳಿಸಿದ್ದಾರೆ.
ಸುದ್ದಿ ಮೂಲ: ಎ ಎನ್ ಐ