ಸ್ವಾವಲಂಬಿ ಗ್ರಾಮದಿಂದ ಸ್ವಾವಲಂಬಿ ಭಾರತದ ಸಂಕಲ್ಪ: ಕೆ. ವಿಜಯ್ ಕೊಡವೂರು

ಉಡುಪಿ: ಜೂನ್ 02 ರಂದು ಮರವಂತೆಯ ಸಾಧನಾ ಸಭಾಭವನದಲ್ಲಿ ಸ್ವಾವಲಂಬಿ ಭಾರತ ಅಭಿಯಾನದ ಅಂಗವಾಗಿ ಸ್ವಾವಲಂಬಿ ಗ್ರಾಮ ಬೈಠಕ್ ಕಾರ್ಯಕ್ರಮವು ನಡೆಯಿತು.

ವಿದ್ಯಾವಂತರು ನಿರೋದ್ಯೋಗಿಗಳಾದಲ್ಲಿ ಕುಡಿತ, ಡ್ರಗ್ಸ್ ಮುಂತಾದ ದುಷ್ಟತಗಳು ಹೆಚ್ಚಾಗಿ ಕಳ್ಳತನ, ದರೋಡೆ, ಲೂಟಿ ಮಾಡಿ ಸಮಾಜವನ್ನು ಕೆಡಿಸುತ್ತಾರೆ. ಈ ಕಾರಣಕ್ಕಾಗಿ ಅವರಿಗೆ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಸ್ವ ಉದ್ಯೋಗ ಕೈಗೊಳ್ಳುವಂತೆ ನಾವೆಲ್ಲರೂ ಪ್ರೋತ್ಸಾಹಿಸಿದರೆ ಅವರು ತಮ್ಮ ಸ್ವಂತ ಕಾಲಿನಲ್ಲಿ ನಿಂತು ಬೆಳೆದು ಸಮಾಜದ ಕಷ್ಟಗಳಿಗೆ ಸ್ಪಂದಿಸುತ್ತಾರೆ ಎಂದು ಜಿಲ್ಲಾ ಸಮನ್ವಯಕ ಕೆ. ವಿಜಯ್ ಕೊಡವೂರು ಅಭಿಪ್ರಾಯಪಟ್ಟರು.

ಕೆಮಿಕಲ್ ಮಿಶ್ರಿತ ಆಹಾರದಿಂದ ಉಂಟಾಗುವ ಕ್ಯಾನ್ಸರ್ ನಂತಹ ಭೀಕರ ರೋಗದಿಂದ ಅನಾರೋಗ್ಯ ಪೀಡಿತ ಸಮಾಜವನ್ನು ರಕ್ಷಿಸಲು ಸಾವಯವ ಕೃಷಿಯನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಶಾಲಾ-ಕಾಲೇಜುಗಳಲ್ಲಿ ಸಾವಯವ ಕೃಷಿಯ ಬಗ್ಗೆ ಜಾಗೃತಿ ನೀಡುವ ಕಾರ್ಯ ನಮ್ಮದಾದಾಗ ಮಾತ್ರ ನಮ್ಮ ಗ್ರಾಮ ಸ್ವಾವಲಂಬಿಯಾಗಲು ಸಾಧ್ಯವಿದೆ.

ಕಾರ್ಯಕ್ರಮದಲ್ಲಿ ಹಾಜರಿದ್ದ ಮಹಿಳೆಯರು ಈ ಕಾರ್ಯವನ್ನು ಮೆಚ್ಚಿ ಮುಂದಿನ ದಿನಗಳಲ್ಲಿ ಮನೆಯಲ್ಲಿಯೆ ಸ್ವಂತ ಉದ್ಯೋಗವನ್ನು ಕೈಗೊಳ್ಳುವ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಈ ಮೂಲಕ ಸ್ವಾವಲಂಬಿ ಗ್ರಾಮಕ್ಕೆ ಸಂಕಲ್ಪ ಮಾಡುವ ಪ್ರಯತ್ನ ಬೈಂದೂರು ತಾಲೂಕಿನ ಮರವಂತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಹ ಸಮನ್ವಯಕ ಪ್ರಸನ್ನ ಉಪ್ಪುಂದ, ಮಾಜಿ ಪಂಚಾಯತ್ ಅಧ್ಯಕ್ಷ ಅನಿತಾ ಆರ್ ಕೆ , ಮಂಜುನಾಥ್ ಮರವಂತೆ, ಪ್ರಿಯದರ್ಶಿನಿ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.