ಬೆಂಗಳೂರು: ಮಂಗಳವಾರ ಬೆಳಗ್ಗೆ 6:30ರ ಸುಮಾರಿಗೆ ನೃಪತುಂಗ ರಸ್ತೆಯಲ್ಲಿರುವ ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ನಿರ್ಮಾಣ ಹಂತದಲ್ಲಿರುವ ಪೋರ್ಟಿಕೋದ ಮೇಲ್ಛಾವಣಿ ಕುಸಿದು ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕನೊಬ್ಬನ ಸ್ಥಿತಿ ಗಂಭೀರವಾಗಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಆತನ ಜೊತೆ ಕೆಲಸ ಮಾಡುತ್ತಿದ್ದ ಮೂವರು ಸಹೋದ್ಯೋಗಿಗಳಿಗೆ ಗಾಯಗಳಾಗಿವೆ. ತೀವ್ರವಾಗಿ ಗಾಯಗೊಂಡಿರುವ ಕಾರ್ಮಿಕನನ್ನು ಆಸ್ಪತ್ರೆಯ ವೆಂಟಿಲೇಟರ್ ನಲ್ಲಿ ನಿಗಾವಣೆಯಲ್ಲಿರಿಸಿದ್ದು, ಇತರ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಪೋರ್ಟಿಕೋದ ನಿರ್ಮಾಣವು ಎರಡು ತಿಂಗಳ ಹಿಂದೆ ಪ್ರಾರಂಭವಾಗಿತ್ತು ಮತ್ತು ಇದು ಒಂದು ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಡೇವಿ ಒಲ್ಲಕೆಂಗಿಲ್ ಅವರು ಖಾಸಗಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. “ಎಲ್ಲಾ ನಾಲ್ವರು ಕಾರ್ಮಿಕರ ಸಂಪೂರ್ಣ ಚಿಕಿತ್ಸೆ ಮತ್ತು ಸಂಬಂಧಿತ ವೆಚ್ಚವನ್ನು ಆಸ್ಪತ್ರೆಯು ಭರಿಸಲಿದೆ. ತೀವ್ರವಾಗಿ ಗಾಯಗೊಂಡಿರುವ ಕಾರ್ಮಿಕನನ್ನು ಬದುಕಿಸಲು ನಾವು ಏನು ಬೇಕಾದರೂ ಮಾಡುತ್ತೇವೆ. ಅವರು ಐಸಿಯುನಲ್ಲಿ ವೆಂಟಿಲೇಟರ್ನಲ್ಲಿದ್ದಾರೆ ಮತ್ತು ನಮ್ಮ ವೈದ್ಯರು ಅವರನ್ನು ಬದುಕಿಸಲು ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಡಾ ಡೇವಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ದೀರ್ಘಕಾಲದವರೆಗೆ ಕಾಯಬೇಕಾದ ಹೊರರೋಗಿಗಳಿಗೆ ಸಹಾಯ ಮಾಡಲು ಪೋರ್ಟಿಕೊವನ್ನು ನಿರ್ಮಾಣ ಮಾಡಲಾಗುತ್ತಿತ್ತು. ಅಪಘಾತ ಸಂಭವಿಸಿದಾಗ ಕಾರ್ಮಿಕರು ಪೋರ್ಟಿಕೋದ ಮಧ್ಯ ಭಾಗದ ಕೆಳಗೆ ನಿಂತಿದ್ದರು. ಮೊದಲೇ ಇದ್ದ ಬಿರುಕಿನಿಂದಾಗಿ ಮೇಲ್ಛಾವಣಿಯು ಕುಸಿತ ಹೊಂದಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಂಜಿನಿಯರ್ ಗಳಿಂದ ಪಡೆಯಲಾಗುತ್ತದೆ ಎನ್ನಲಾಗಿದೆ.
ವರದಿ ಮತ್ತು ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್