ನವದೆಹಲಿ: 64 ವರ್ಷ ವಯಸ್ಸಿನ ಹಿಂದಿ ಕಾದಂಬರಿಕಾರ್ತಿ, ಭಾರತೀಯ ಲೇಖಕಿ ಗೀತಾಂಜಲಿ ಶ್ರೀ ಮತ್ತು ಅಮೇರಿಕನ್ ಅನುವಾದಕಿ ಡೈಸಿ ರಾಕ್ವೆಲ್ ಅವರ ‘ಟಾಂಬ್ ಆಫ್ ಸ್ಯಾಂಡ್’ ಕಾದಂಬರಿಗೆ ಸಾಹಿತ್ಯ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ. ಮೂಲತಃ ಹಿಂದಿಯಲ್ಲಿ ಬರೆದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದ ಮೊದಲ ಪುಸ್ತಕ ಇದಾಗಿದ್ದು, ಪ್ರಶಸ್ತಿಯನ್ನು ಗೊದ್ದ ಮೊದಲ ಭಾರತೀಯ ಮಹಿಳೆ ಎನ್ನುವ ಹೆಗ್ಗಳಿಕೆಗೆ ಗೀತಾಂಜಲಿ ಪಾತ್ರರಾಗಿದ್ದಾರೆ.
1947ರಲ್ಲಿ ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ನಂತರ ತನ್ನ ಪತಿಯನ್ನು ಕಳೆದುಕೊಂಡ 80 ವರ್ಷದ ವೃದ್ಧ ವಿಧವೆಯ ಕಥೆಯನ್ನು ಹೇಳುತ್ತದೆ. ಪತಿ ಕಳೆದುಕೊಂಡ ಬಳಿಕ ವಿಧವೆ ಮಹಿಳೆ ಖಿನ್ನತೆಗೆ ಜಾರುತ್ತಾಳೆ. ಸಾಕಷ್ಟು ಹೋರಾಟದ ನಂತರ ಅವಳು ತನ್ನ ಖಿನ್ನತೆಯಿಂದ ಹೊರಬರುತ್ತಾಳೆ. ವಿಭಜನೆಯ ಸಮಯದಲ್ಲಿ ಆದ ನೋವುಗಳನ್ನು ಎದುರಿಸಲು ಪಾಕಿಸ್ತಾನಕ್ಕೆ ಹೋಗಲು ನಿರ್ಧರಿಸುತ್ತಾಳೆ. ಹೀಗೆ ಪಾಕಿಸ್ತಾನದ ಗಡಿಯನ್ನು ದಾಟುವ ರೋಮಾಂಚಕ ಕಥಾಹಂದರವನ್ನು ಹೊಂದಿರುವ ಕಾದಂಬರಿ ಇದಾಗಿದೆ.
ಪ್ರಶಸ್ತಿ ಗೆದ್ದ ಗೀತಾಂಜಲಿ ಮತ್ತು ಡೈಸಿಗೆ 50,000 ಪೌಂಡ್ಗಳ ($63,000) ಮೊತ್ತವನ್ನು ನೀಡಲಾಗಿದೆ. ಇದನ್ನು ಇಬ್ಬರಿಗೂ ಸಮಾನವಾಗಿ ಹಂಚಲಾಗುತ್ತದೆ. ಗೀತಾಂಜಲಿ ನವದೆಹಲಿಯಲ್ಲಿ ವಾಸಿಸುತ್ತಿದ್ದರೆ, ರಾಕ್ವೆಲ್ ವರ್ಮೊಂಟ್ನಲ್ಲಿ ವಾಸಿಸುತ್ತಿದ್ದಾರೆ.
ಮೂರು ಕಾದಂಬರಿಗಳು ಮತ್ತು ಹಲವಾರು ಕಥಾ ಸಂಕಲನಗಳೊಂದಿಗೆ, 64 ವರ್ಷದ ಶ್ರೀ ಅವರ ಕೃತಿಯನ್ನು ಇಂಗ್ಲಿಷ್, ಫ್ರೆಂಚ್, ಜರ್ಮನ್, ಸರ್ಬಿಯನ್ ಮತ್ತು ಕೊರಿಯನ್ ಸೇರಿದಂತೆ ಹಲವಾರು ಭಾಷೆಗಳಿಗೆ ಅನುವಾದಿಸಲಾಗಿದೆ ಮತ್ತು ಹಲವಾರು ಪ್ರಶಸ್ತಿಗಳು ಮತ್ತು ಫೆಲೋಶಿಪ್ಗಳಿಗಾಗಿ ನಾಮನಿರ್ದೇಶನ ಮಾಡಲಾಗಿದೆ. ‘ಟಾಂಬ್ ಆಫ್ ಸ್ಯಾಂಡ್’ ಯುಕೆಯಲ್ಲಿ ಪ್ರಕಟವಾದ ಅವರ ಮೊದಲ ಪುಸ್ತಕಗಳಲ್ಲಿ ಒಂದಾಗಿದೆ. ಶ್ರೀ ಅವರ ಜೊತೆ ವಿಭಿನ್ನ ಭಾಷೆಗಳ ಆರು ಕಾದಂಬರಿಗಳನ್ನು ಪ್ರಶಸ್ತಿಗಾಗಿ ಪಟ್ಟಿ ಮಾಡಲಾಗಿತ್ತು. ಅವೆಲ್ಲವನ್ನೂ ಹಿಂದಿಕ್ಕಿ ‘ಟಾಂಬ್ ಆಫ್ ಸ್ಯಾಂಡ್’ ಪ್ರಶಸ್ತಿಯನ್ನು ಬಾಚಿಕೊಂಡಿದೆ.
“ನಾನು ಬೂಕರ್ ಬಗ್ಗೆ ಕನಸು ಕಾಣಿರಲಿಲ್ಲ, ಇದು ಸಾಧ್ಯ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಎಂತಹ ದೊಡ್ಡ ಮನ್ನಣೆ, ನಾನು ಆಶ್ಚರ್ಯಚಕಿತಳಾಗಿದ್ದೇನೆ, ಸಂತೋಷಪಡುತ್ತೇನೆ, ಗೌರವ ಮತ್ತು ವಿನಮ್ರಳಾಗಿದ್ದೇನೆ, ಪ್ರಶಸ್ತಿ ಬರುವುದರಲ್ಲಿ ಒಂದು ವಿಷಣ್ಣತೆಯ ಸಂತೃಪ್ತಿ ಇದೆ. ”ಎಂದು ಶ್ರೀ ತಮ್ಮ ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಹೇಳಿದ್ದಾರೆ.