ನವದೆಹಲಿ: ಎಪ್ಪತ್ತರ ದಶಕದಲ್ಲಿ 75 ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದ, ಬಹು ಸುಪ್ರಸಿದ್ದ ಸಾಂಪ್ರದಾಯಿಕ ಅಂಬಾಸಿಡರ್ ಕಾರುಗಳು ತೆರೆಮರೆಗೆ ಸರಿದು ಹಲವು ವರ್ಷಗಳಾಗಿವೆ. ಆದರೀಗ ಹಳೆ ಮಾಡೆಲ್ ಕಾರುಗಳನ್ನು ಮತ್ತೆ ಹೊಸ ಅವತಾರದಲ್ಲಿ ಭಾರತದ ರಸ್ತೆಗಿಳಿಸಲು ಮಾತೃ ಕಂಪನಿ ಹಿಂದೂಸ್ತಾನ್ ಮೋಟಾರ್ಸ್ ಸಜ್ಜಾಗುತ್ತಿದೆ ಎಂದು ವರದಿಯಾಗಿದೆ.
ತನ್ನ ಐಕಾನಿಕ್ ಅಂಬಾಸಿಡರ್ ಕಾರುಗಳಿಗೆ ಭಾರತದಲ್ಲಿ ಪ್ರಸಿದ್ಧವಾಗಿರುವ ಹಿಂದೂಸ್ತಾನ್ ಮೋಟಾರ್ಸ್, ಭಾರತೀಯ ಮಾರುಕಟ್ಟೆಯಲ್ಲಿ ತನ್ನನ್ನು ಪುನರ್ ಸ್ಥಾಪಿಸಲು ಯೋಜಿಸುತ್ತಿದ್ದು, ಈ ಬಾರಿ ಎಲೆಕ್ಟ್ರಿಕ್ ವಾಹನ ತಯಾರಕನಾಗಿ ಹೊರಹೊಮ್ಮಲಿದೆ ಎನ್ನಲಾಗಿದೆ.
ತನ್ನ ಸ್ಥಾವರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಉತ್ಪಾದಿಸಲು ಸಂಸ್ಥೆಯು ಈಗ ಫ್ರೆಂಚ್ ವಾಹನ ತಯಾರಕ peugeot ನೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ಇದಲ್ಲದೆ, ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಯೋಚಿಸುತ್ತಿರುವ ಕಂಪನಿಯು ಅಂಬಾಸಿಡರ್ 2.0 ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಸಜ್ಜಾಗಿದೆ. ಹಿಂದುಸ್ತಾನ್ ಟೈಮ್ಸ್ ಅಟೋ ವರದಿಯ ಪ್ರಕಾರ, ತಮ್ಮ ಪಾಲುದಾರಿಕೆಯನ್ನು ಅಧಿಕೃತಗೊಳಿಸಲು ಎರಡೂ ಕಂಪನಿಗಳು ಎಂಒಯುಗೆ ಸಹಿ ಹಾಕಿವೆ.
ಮೊದಲಿಗೆ ಇವಿ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡಲಿರುವ ಕಂಪನಿಯು ಮುಂದಿನ ದಿನಗಳಲ್ಲಿ ಅಂಬಾಸಿಡರ್ ಇವಿ ಕಾರುಗಳನ್ನು ತಯಾರಿಸಬಹುದು ಎಂದು ಅಂದಾಜಿಸಲಾಗಿದೆ. ಆದಾಗ್ಯೂ ,ಈ ಬಗ್ಗೆ ಸ್ಪಷ್ಟವಾದ ನಿಲುವು ಇನ್ನೂ ತೆಗೆದುಕೊಳ್ಳಲಾಗಿಲ್ಲ. ಭಾರತೀಯ ಮಾರುಕಟ್ಟೆಯಲ್ಲಿ ಇವಿ ವಾಹನ ತಯಾರಕ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸ್ಪರ್ಧೆ ಮತ್ತು ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಿರುವುದಂತೂ ಸ್ಪಷ್ಟವಾಗಿದೆ.