ಕೋಟೇಶ್ವರ: ಖ್ಯಾತ ಉದ್ಯಮಿ, ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಗೋಪಾಲಕೃಷ್ಣ (ಭೋಜಣ್ಣ) ಅವರು ಗುರುವಾರ ಬೆಳಿಗ್ಗೆ ತಮ್ಮ ಸ್ವಂತ ರಿವಾಲ್ವರ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಇಲ್ಲಿನ ಕೋಟೇಶ್ವರ ಸಮೀಪದ ಪುರಾಣಿಕ ರಸ್ತೆಯ ಕುದುರೆಬೆಟ್ಟುವಿನಲ್ಲಿರುವ ಮೊಳಹಳ್ಳಿ ಗಣೇಶ್ ಶೆಟ್ಟಿ ಎಂಬುವರ ಮನೆಯ ಸಿಟೌಟ್ ನಲ್ಲಿ ಕಟ್ಟೆ ಭೋಜಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಹುಕೋಟಿ ಉದ್ಯಮಿಯಾಗಿರುವ ಕಟ್ಟೆ ಭೋಜಣ್ಣ, ಗಂಗೊಳ್ಳಿ, ತಲ್ಲೂರು, ಬೈಂದೂರು ಸೇರಿದಂತೆ ಬೆಂಗಳೂರಿನಲ್ಲೂ ಹೋಟೆಲ್, ಬಟ್ಟೆ ಅಂಗಡಿ ಮೊದಲಾದ ಉದ್ಯಮಗಳನ್ನು ನಡೆಸುತ್ತಿದ್ದರು. ಕುಂದಾಪುರದ ಪ್ರಸಿದ್ದ ಚಿನ್ಮಯಿ ಆಸ್ಪತ್ರೆ ಮಾಲೀಕರಾಗಿರುವ ಅವರು ಕಟ್ಟೆ ಭೋಜಣ್ಣ ಎಂದೇ ಹೆಸರುವಾಸಿಯಾಗಿದ್ದರು. ಮೊಗವೀರ ಸಮುದಾಯದ ಬಗ್ವಾಡಿ ಮಹಿಷಾಸುರಮರ್ದಿನಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಭಾಗೀರಥಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.