ಮಂದಾರ್ತಿ: ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಬೆಂಗಳೂರಿನ ಯುವ ಜೋಡಿ ಮಂದಾರ್ತಿ ಸಮೀಪದ ಹೆಗ್ಗುಂಜೆಯಲ್ಲಿ ಬಾಡಿಗೆ ಕಾರಿಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಬಗ್ಗೆ ಮಕ್ಕಳ ಹೆತ್ತವರು ಪ್ರತಿಕ್ರಿಯೆ ನೀಡಿದ್ದು, ತಮ್ಮ ಮಕ್ಕಳು ಪ್ರೀತಿಸುತ್ತಿದ್ದ ವಿಷಯ ತಿಳಿದಿರಲಿಲ್ಲ, ಗೊತ್ತಿದ್ದಿದ್ದರೆ ಅವರಿಬ್ಬರಿಗೂ ಮದುವೆ ಮಾಡಿಸುತ್ತಿದ್ದೆವು ಎಂದು ಹೇಳಿದ್ದಾರೆ.
23 ವರ್ಷದ ಯಶವಂತ್ ಯಾದವ್ ವಿ ಮತ್ತು ಜ್ಯೋತಿ ಎಂ ಅವರ ಮೃತದೇಹಗಳು ಭಾನುವಾರ ಮುಂಜಾನೆ ಸುಟ್ಟ ಕಾರಿನೊಳಗೆ ಪತ್ತೆಯಾಗಿತ್ತು. ಬೆಂಗಳೂರಿನ ನಿವಾಸಿಗಳಾದ ಈ ಯುವ ಜೋಡಿ, ಮೇ 18 ರಂದು ಮನೆ ಬಿಟ್ಟು ಉಡುಪಿಗೆ ಬಂದಿದ್ದು, ಮೇ 22 ರಂದು ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತು ತಮಗೆ ತಾವೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸುಟ್ಟ ಮೃತದೇಹಗಳು ಲಾಕ್ ಮಾಡಲಾದ ಗಾಡಿಯೊಳಗೆ ಪತ್ತೆಯಾಗಿದ್ದು, ಯಶವಂತ್ ಯಾದವ್ ಮತ್ತು ಜ್ಯೋತಿಯ ಪೋಷಕರು ಯುವಕ ಮತ್ತು ಯುವತಿಯ ಪ್ರೇಮ ಪ್ರಕರಣದ ಬಗ್ಗೆ ನಮಗೆ ತಿಳಿದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ಮಕ್ಕಳ ಪ್ರೀತಿಯ ಬಗ್ಗೆ ತಮಗೇನೂ ಗೊತ್ತಿಲ್ಲ, ಗೊತ್ತಿದ್ದಿದ್ದರೆ ಅವರಿಗೆ ಮದುವೆ ಮಾಡಿಸುತ್ತಿದ್ದೆವು ಎಂದಿರುವ ಪೋಷಕರು ಮಕ್ಕಳಿಗೆ ಜಗತ್ತನ್ನು ಎದುರಿಸುವ ತಾಕತ್ತಿರಲಿಲ್ಲ ಎಂದಿದ್ದಾರೆ.
ಮನೆ ಬಿಟ್ಟು ಬರುವಾಗ ಜೊತೆಯಲ್ಲಿ ತಂದಿದ್ದ ಹಣವೆಲ್ಲ ಮುಗಿದ ಬಳಿಕ ಜೋಡಿ ಈ ಹೆಜ್ಜೆ ಇಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಬಿಕಾಂ ಪದವೀಧರೆಯಾಗಿದ್ದರೂ ಅತ್ಯಂತ ಸೂಕ್ಷ್ಮ ಸ್ವಭಾವದವಳಾಗಿದ್ದು, ಬೇಗನೆ ಭಯ ಬೀಳುವ ವ್ಯಕ್ತಿತ್ವ ಹೊಂದಿದ್ದಳು ಎಂದು ಆಕೆಯ ಸಂಬಂಧಿ ಸೀನಪ್ಪ ತಿಳಿಸಿದ್ದಾರೆ.
ತನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳಬಹುದೆಂದು ನಂಬಲು ಸಾಧ್ಯವೇ ಇಲ್ಲ ಎಂದು ಯುವಕನ ತಂದೆ ಯಶವಂತ್ ರಾವ್ ಹೇಳಿದ್ದಾರೆ. ಅವನು ಮುಗ್ಧ, ಪೋಷಕರಿಗೆ ನೋವನ್ನುಂಟುಮಾಡಿದ್ದಕ್ಕಾಗಿ ಕ್ಷಮೆಯಾಚಿಸಿ ಎಸ್ ಎಂ ಎಸ್ ಸಂದೇಶವನ್ನು ಕಳುಹಿಸಿದ್ದನು. ತಾನು ಒಬ್ಬಂಟಿಯಾಗಿ ಬದುಕಲು ಸಾಧ್ಯವಿಲ್ಲ ಮತ್ತು ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ಸಂದೇಶದಲ್ಲಿ ತಿಳಿಸಿದ್ದನು ಎಂದಿರುವ ಅವರು ಯುವತಿಯ ಬಗ್ಗೆ ತಮ್ಮ ಕುಟುಂಬದ ಯಾರಿಗೂ ತಿಳಿದಿರಲಿಲ್ಲ, ಮಗ ತನ್ನ ಪ್ರೇಮ ಪ್ರಕರಣದ ಬಗ್ಗೆ ಹೇಳಿದ್ದರೆ ಅವನ ಮದುವೆಯನ್ನು ಏರ್ಪಡಿಸಬಹುದಿತ್ತು, ಈ ಹೆಜ್ಜೆ ಇಡುವ ಮೊದಲು ಆತ ಕರೆ ಮಾಡಬೇಕಾಗಿತ್ತು ಎಂದಿದ್ದಾರೆ ಎನ್ನಲಾಗಿದೆ.