ನಮ್ಮ ಮನೆ ಅಂಗಳದಲ್ಲೇ ಬೆಳೆಯಬಹುದಾದ ಜೌಷದೀಯ ಸಸ್ಯಗಳ ಪೈಕಿ ದೊಡ್ಡಪತ್ರೆಗೆ ತನ್ನದೇ ಆದ ದೊಡ್ಡಸ್ತಿಕೆ ಇದೆ. ಮನೆಯ ಅಂಗಳದಲ್ಲಿ ದೊಡ್ಡಪತ್ರೆಯ ಗಿಡವೊಂದಿದ್ದರೆ ಸಣ್ಣ ಪುಟ್ಟ ಕಾಯಿಲೆಗೆಲ್ಲಾ ದೊಡ್ಡಪತ್ರೆ ದೊಡ್ಡ ಪಾತ್ರವಹಿಸುತ್ತದೆ. ದೊಡ್ಡ ಪತ್ರೆಯ ಸಸ್ಯಶಾಸ್ತ್ರೀಯ ಹೆಸರು ಕಾಲಿಯಸ್ ಅರೋಮ್ಯಾಟಿಕಸ್. ಈ ಸಸ್ಯದ ಮೂಲ ಭಾರತ, ಆಗ್ನೇಯ ಏಷ್ಯಾ, ದಪ್ಪ ಮುಸುಡಿಯ ಈ ದೊಡ್ಡ ಪತ್ರೆಯ ಗಿಡ, ಮನೆಯ ನೀರು ಹೋಗುವಲ್ಲಿಯೋ?ಅಂಗಳದ ನೀರಿನ ತೇವಾಂಶ ದಟ್ಟವಾಗಿ ವ್ಯಾಪಿಸುವ ಜಾಗ ಹುಡುಕಿ ಹುಲುಸಾಗಿ ಬೆಳೆಯುತ್ತದೆ.
ಔಷಧೀಯ ಆಗರ:
- ದಪ್ಪ ಕಾಂಡಗಳಿಂದ ಮೈ ಸೋಕಿ ದಷ್ಟಪುಷ್ಟ ಸಸ್ಯದಂತೆ ಕಂಡರೂ ಇದರ ಕಾಂಡ ತೀರಾ ವೃದು ಸ್ವಭಾವಿ. ಬಟ್ಟಲಿನಾಕಾರದ ಎಲೆಗಳೂ ಅಮೋಫ ಪರಿಮಳವನ್ನು ಸೂಸಿ ಮೃದುವಾಗಿ ಇರುವುದರಿಂದ ಅದರ ರಸ, ಕಫ, ಶೀತ, ನೆಗಡಿ ನಿವಾರಿಸಿ ಬಿಡುವ ನವ ಚೈತನ್ಯ ಶಕ್ತಿ.
- ಮುಖ್ಯವಾಗಿ ಎದೆಯಲ್ಲಿ ಕಫ ಗಟ್ಟಿಯಾದಾಗಲೆಲ್ಲಾ, ದೊಡ್ಡಪತ್ರೆಯ ಎಲೆಯನ್ನು ಚೆನ್ನಾಗಿ ಬಿಸಿಮಾಡಿ ಆಗ ಉಕ್ಕುವ ಅದರ ರಸವನ್ನು ಜೇನುತುಪ್ಪ,ಕರಿಮೆಣಸಿನ ಹುಡಿಯ ಜತೆ ಬೆರೆಸಿ ಕುಡಿದರೆ ಕಫ,ಹಾಗೂ ಕೆಮ್ಮಿಗೂ ಒಳ್ಳೆಯ ರಾಮಬಾಣ.ಬರೀ ಜೌಷದೀಯ ಗುಣಗಳನ್ನಷ್ಟೇ ಮೈಗೂಡಿಸಿಕೊಂಡಿರುವ ದೊಡ್ಡಪತ್ರೆಗೆ ಅಡುಗೆಕೋಣೆಯಲ್ಲೂ ಪ್ರಾಶಸ್ತ್ಯವಿದೆ.
- ಈ ಎಲೆಯ ಗೊಜ್ಜು,ತಂಬುಳಿ,ಚಟ್ನಿ ದೇಹಕ್ಕೆ ಒಳ್ಳೆಯ ರಸಪಾಕ. ಕಡ್ಲೆಹಿಟ್ಟಿಗೆ,ಉಪ್ಪು,ನೀರು,ಇಂಗು ಹಾಕಿ. ಕಲಸಿ ಅದಕ್ಕೆ ದೊಡ್ಡಪತ್ರೆಯ ಎಲೆಯನ್ನು ಮುಳುಗಿಸಿ ಎಣ್ಣೆಗೆ ಬಿಟ್ಟರೆ ತಯಾರಾದ ದೊಡ್ಡಪತ್ರೆಯ ಬೊಂಡಾ ಕೂಡ ಬಾಯಿಗೆ ಭರ್ಜರಿ ನೈವೇದ್ಯ.
- ಇದರ ತಂಬುಳಿಯೂ ದೇಹಕ್ಕೆ ಹಿತ.
-ಪ್ರಸಾದ್ ಶೆಣೈ