ಕುಂಭಾಶಿ: ಕೆರೆ ಸ್ವಚ್ಚತಾ ಹಾಗೂ ಮರು ನಿರ್ಮಾಣ ಕಾರ್ಯ ಸಂಪೂರ್ಣ

ಉಡುಪಿಯ ವೆಂಟನಾ ಫೌಂಡೇಶನ್ ನ ನೇತೃತ್ವದಲ್ಲಿ ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರವಡಿ ರಸ್ತೆಯ ಶ್ರೀ ವಿಷ್ಣು ಮೂರ್ತಿ ದೇವಾಸ್ಥಾನ ಸಮೀಪ ಕೊಯ್ಯಾರಿ ಕೆರೆಯನ್ನು ಸ್ಚಚ್ಚಗೊಳಿಸುವ ಕಾರ್ಯ ಮುಕ್ತಾಯಗೊಂಡಿದ್ದು, ಗ್ರಾಮ ಪಂಚಾಯತಿಗೆ ಹಸ್ತಾಂತರ ಮಾಡುವ ಕಾರ್ಯ ಮೇ 17 ರಂದು ನಡೆಯಿತು.

ವೆಂಟನಾ ಫೌಂಡೇಶನ್ ಅಧ್ಯಕ್ಷ ಹಾಗೂ ಉಡುಪಿಯ ಮಾಹಿತಿ ತಂತ್ರಜ್ಞಾನದ ದಿಗ್ಗಜ ಸಂಸ್ಥೆ 99 ಗೇಮ್ಸ್ ಆನ್ ಲೈನ್ ಪ್ರೈ.ಲಿ. ನ. ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಭಟ್ ಮೇ 8 ರಂದು ಕೆರೆ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದ್ದರು. ಹತ್ತು ದಿನಗಳ ಕಾಲ ನಿರಂತರ ನಡೆದ ಸ್ವಚ್ಚತಾ ಕಾರ್ಯದ ಸಂಪೂರ್ಣ ವೆಚ್ಚವನ್ನು ಸೇವಾ ರೂಪದಲ್ಲಿ ಫೌಂಡೇಶನ್ ಮೂಲಕ ನೀಡಲಾಯಿತು. ಮೊದಲು ನೀರನ್ನು ಬರಿದಾಗಿಸಿ, ಹೂಳನ್ನು ಎತ್ತಿ ಬೇರೆಡೆ ಸಾಗಿಸಿ ಕೆರೆಯಲ್ಲಿ ಬೆಳೆದ ಗಿಡ ಗಂಟಿಗಳನ್ನು ತೆಗೆದು ಸಂಪೂರ್ಣವಾಗಿ ಸ್ವಚ್ಚಗೊಳಿಸಿ ಸುತ್ತಲಿನ ಗದ್ದೆಗಳನ್ನು ಪುನಃ ಮೊದಲಿನ ಹಾಗೆಯೇ ಸಮತಟ್ಟುಗೊಳಿಸಲಾಗಿತ್ತು.

ಈ ಕೆರೆಯ ಪುನಶ್ಚೇತನದಿಂದ ಸುತ್ತಲಿನ ಗದ್ದೆಗಳಿಗೆ ನೀರು ಸಿಗುವಂತೆ ಮಾಡುವುದು, ಸ್ಥಳೀಯ ರೈತರಿಗೆ ಬೇಸಾಯದ ಜೊತೆಯಲ್ಲಿ ವರ್ಷವಿಡೀ ತರಕಾರಿ, ವಾಣಿಜ್ಯ ಬೆಳೆಗಳನ್ನು ಬೆಳೆಯಲು‌ ಸಹಾಯ ಮಾಡುವುದು ಹಾಗೂ ಪರಿಸರದ ಪ್ರಾಣಿ‌ಪಕ್ಷಿಗಳಿಗೆ ಕುಡಿಯುವ ನೀರಿನ‌ ಸೌಲಭ್ಯ ಕಲ್ಪಿಸುವುದು ಇದರ ಉದ್ದೇಶವಾಗಿತ್ತು.

ಈ ಸಂಧರ್ಭದಲ್ಲಿ ವೆಂಟನಾ ಫೌಂಡೇಶನ್ ನ ಸದಸ್ಯೆ ಶೈಲಜಾ ರಾವ್ ಮಾತನಾಡುತ್ತಾ, ಆದಾಯದ ಒಂದು ಭಾಗವನ್ನು ಸಮಾಜದ ಸೇವೆಗೆ ಮೀಸಲಿಡಬೇಕು. ರೋಹಿತ್ ಭಟ್ ಅವರ ನೇತೃತ್ವದಲ್ಲಿ ಸಮಾನ ಮನಸ್ಕರೊಂದಿಗೆ ವೆಂಟನಾ ಫೌಂಡೇಶನ್ ಸಂಸ್ಥೆಯನ್ನು ಆರಂಭಿಸಿರುವುದಾಗಿ‌ ತಿಳಿಸಿದ ಅವರು, ಸಂಸ್ಥೆಯ ಕಾರ್ಯ ವ್ಯಾಪ್ತಿಯನ್ನು ವಿವರಿಸುತ್ತಾ ಕೆರೆಯ ಸ್ಚಚ್ಚತೆ ಈ ಬಾರಿಯ ಮಹತ್ವಾಕಾಂಕ್ಷೆಯ ಯೋಜನೆ, ಪರಿಸರ ಕಾಳಜಿಯ ಒಂದು ಭಾಗ ಕೆರೆಗಳ ಸ್ಚಚ್ಚತೆ. ಇದರಿಂದ ಸುತ್ತಮುತ್ತಲಿನ ಗದ್ದೆಗಳಿಗೆ ಕೃಷಿ ಕಾರ್ಯಗಳಿಗೆ ವರ್ಷವಿಡೀ ನೀರು ದೊರಕಲಿದ್ದು, ಪಕ್ಷಿ ಸಂಕುಲಕ್ಕೂ ಈ ಕೆರೆ ಸಹಕಾರಿಯಾಗಲಿ ಎಂದರು.

ಫೌಂಡೇಶನ್ ನ ಇನ್ನೋರ್ವ ಸದಸ್ಯ ಸುಧೀರ್ ಅಣ್ಣಿ ಮಾತನಾಡುತ್ತಾ ಒಂದು ಕೈಯಿಂದ ಚಪ್ಪಾಳೆ ತಟ್ಟಲಾಗುವುದಿಲ್ಲ. ಫೌಂಡೇಶನ್ ನ ಈ ಕಾರ್ಯಕ್ಕೆ ಸ್ಥಳೀಯರೂ ಸಂಪೂರ್ಣ ಸಹಕಾರ ನೀಡಿ ಕೈ ಜೋಡಿಸಿದ್ದರಿಂದ ಈ ಹವಾಮಾನ ವೈಪರೀತ್ಯದ ನಡುವೆಯೂ ಶೀಘ್ರವಾಗಿ ಕಾರ್ಯ ಮುಕ್ತಾಯಗೊಳ್ಳಲು ಸಾಧ್ಯವಾಯಿತು ಎಂದರು.

ಸ್ಥಳೀಯರಾದ ರಾಮಚಂದ್ರ ಉಪಾಧ್ಯ ಮಾತನಾಡುತ್ತಾ, ಸರಕಾರೇತರ ಸಂಸ್ಥೆಯಾದ ವೆಂಟನಾ ಫೌಂಡೇಶನ್ ಪರಿಸರ ಉಳಿವಿಗಾಗಿ ಕೆರೆ ಸ್ಚಚ್ಚತೆಯ ಕಾರ್ಯ ಕೈಗೊಂಡಿರುವುದು ಶ್ಞಾಘನೀಯ. ಸ್ಚಚ್ಚತೆಯ ನಂತರ ಸುತ್ತಮುತ್ತಲಿನ ಗದ್ದೆಗಳನ್ನು ಮೊದಲಿನಂತೆಯೇ ಸಮತಟ್ಟುಗೊಳಿಸಿ ಕೃಷಿಕರಿಗೆ ಹಸ್ತಾಂತರಗೊಳಿಸಿದ್ದು ಸಂಸ್ಥೆಯ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿ ಎಂದರು.

ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ಎಸ್. ಆರ್. ಮಾತನಾಡಿ, ಮುಂದಿನ ದಿನಗಳಲ್ಲಿ ಫೌಂಡೇಶನ್ ನ ಇನ್ನಷ್ಟು ಯೋಜನೆಗಳಿಂದ ಜನರಿಗೆ ಹಾಗೂ ಪರಿಸರಕ್ಕೆ ಪ್ರಯೋಜನವಾಗಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಮ್ ಶೆಟ್ಟಿ, ಪಂಚಾಯತ್ ಸಿಬ್ಬಂದಿ ಮಂಜುನಾಥ್, ವಾರ್ಡ್ ಸದಸ್ಯರಾದ ಆನಂದ ಪೂಜಾರಿ, ಇಂಜಿನಿಯರ್ ಶ್ರೀನಿಧಿ ಉಪಾಧ್ಯ, ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಶ್ರೀಧರ್ ಪುರಾಣಿಕ, ಸ್ಥಳೀಯರಾದ ಸುರೇಶ್, ಪ್ರಕಾಶ್ , ಬಾಬು, ರಣಜಿತ್, ಶ್ರೀನಿವಾಸ್ ಪೂಜಾರಿ, ಸುಮೇಧ್ ಉಪಸ್ಥಿತರಿದ್ದರು.

ಶ್ರೀಧರ್ ಪುರಾಣಿಕ ಸ್ವಾಗತಿಸಿದರು, ಚಂದ್ರ ಇಂಬಾಳಿ ವಂದಿಸಿದರು.

ವೆಂಟನಾ ಫೌಂಡೇಶನ್ ಕುರಿತು

ಇತ್ತೀಚೆಗೆ ಆರಂಭಗೊಂಡ ಈ ಫೌಂಡೇಶನ್ ಮುಂದಿನ ಯೋಜನೆ: ಸರಕಾರಿ ಹಿರಿಯ ಪ್ರಾಥಮಿಕ‌ ಶಾಲೆ‌ ಕೊರವಡಿಯ ಶಿಥಿಲಾವಸ್ಥೆಯಲ್ಲಿರುವ ಹೆಣ್ಣು ಮಕ್ಕಳ ಶೌಚಾಲಯದ ಪುನರ್ ನಿರ್ಮಾಣ ಕಾರ್ಯ. ಶೌಚಾಲಯ ನಿರ್ಮಾಣ ಕಾರ್ಯವು ಈಗಾಗಲೇ ಆರಂಭಗೊಂಡಿದ್ದು, ಜೂನ್ ಅಂತ್ಯದ ಒಳಗೆ ಪೂರ್ಣಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸರಕಾರಿ ಶಾಲೆಗೆ ಪೀಠೋಪಕರಣ, ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮುಂತಾದ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ.