ದೇಶದಲ್ಲಿ ಏರುತ್ತಿರುವ ಗೋಧಿ ಬೆಲೆ ತಗ್ಗಿಸಲು ರಫ್ತಿಗೆ ನಿಷೇಧ ಹೇರಿದ ಭಾರತ: ನಿರ್ಧಾರದಿಂದ ಯೂರೋಪಿನಲ್ಲಿ ತಳಮಳ!

ದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಗೋಧಿ ಮತ್ತು ಅದರ ಉತ್ಪನ್ನಗಳ ಬೆಲೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ತತ್ಕಾಲದಿಂದಲೇ ಜಾರಿಗೆ ಬರುವಂತೆ ಗೋದಿಯ ರಫ್ತನ್ನು ನಿಷೇಧಿಸಿ ಭಾರತ ಸರಕಾರದ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಆದೇಶ ಹೊರಡಿಸಿದ್ದಾರೆ.

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ದ, ಹಾಗೂ ಏರುತ್ತಿರುವ ತಾಪಮಾನದಿಂದಾಗಿ ವಿದೇಶೀ ಮಾರುಕಟ್ಟೆಗಳಲ್ಲಿ ಗೋಧಿಯ ಆವಕ ಕಡಿಮೆಯಾಗುತ್ತಿದ್ದು, ಯೂರೋಪ್, ಅಮೇರಿಕಾ ಮತ್ತಿತರ ದೇಶಗಳಿಗೆ ಗೋಧಿಯನ್ನು ರಫ್ತು ಮಾಡುವ ಉದ್ದೇಶದಲ್ಲಿದ್ದ ಭಾರತವು ಇದೀಗ ರಫ್ತಿನ ಮೇಲೆ ನಿಷೇಧ ಹೇರಿರುವುದು ಯೂರೋಪ್ ಮುಂತಾದ ದೇಶಗಳಲ್ಲಿ ತಳಮಳವನ್ನು ಹೆಚ್ಚಿಸಿದೆ ಎನ್ನಲಾಗಿದೆ.

ರಷ್ಯಾ ಮತ್ತು ಉಕ್ರೇನ್ ಅತಿ ಹೆಚ್ಚು ಗೋಧಿ ಉತ್ಪಾದಿಸುವ ದೇಶಗಳಾಗಿದ್ದು, ಈ ಎರಡೂ ದೇಶಗಳೂ ಯುದ್ದ ನಿರತವಾಗಿವೆ. ವಿಶ್ವದ ಎರಡನೇ ಅತಿದೊಡ್ಡ ಗೋಧಿ ಉತ್ಪಾದಕ ರಾಷ್ಟ್ರವಾದ ಭಾರತದಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ಅಂದಾಜಿಸಲಾಗಿರುವ ಪ್ರಮಾಣ( 111.32 ಮಿಲಿಯನ್ ಟನ್) ದಲ್ಲಿ ಗೋಧಿ ಉತ್ಪಾದನೆ ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಉದ್ಭವವಾಗಿದೆ. ಗೋಧಿ ಮತ್ತು ಅದರ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಿದಲ್ಲಿ ದೇಶೀಯವಾಗಿ ಗೋಧಿಯ ಬೆಲೆ ಹೆಚ್ಚಾಗಲಿದೆ. ಈ ಕಾರಣದಿಂದ ಭಾರತವು ಗೋಧಿ ರಫ್ತಿನ ಮೇಲೆ ನಿಷೇಧ ಹೇರಿದೆ. ಅದಾಗ್ಯೂ, ವಿಶ್ವದ ಇತರ ದೇಶಗಳ ಆಹಾರ ಭದ್ರತೆಯ ಸಲುವಾಗಿ, ಯಾವುದೇ ದೇಶಗಳು ಗೋಧಿ ಪೂರೈಕೆಗಾಗಿ ವಿನಂತಿ ಮಾಡಿಕೊಂಡಲ್ಲಿ ಅಂತಹ ದೇಶಗಳಿಗೆ ಗೋಧಿ ಪೂರೈಕೆ ಅಬಾಧಿತವಾಗಲಿರುವುದು ಎಂದು ಸರ್ಕಾರ ತಿಳಿಸಿದೆ.

ಭಾರತದ ಈ ನಿರ್ಧಾರವು ಯೂರೋಪ್ ಅನ್ನು ಕಂಗೆಡಿಸಿದ್ದು, ಭಾರತದ ಈ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದೆ ಎಂದು ವರದಿಯಾಗಿದೆ.