ಉಡುಪಿ: ಸಹಬಾಳ್ವೆ ಉಡುಪಿ ಹಾಗೂ ಕರ್ನಾಟಕದ ಸೌಹಾರ್ದ ಪರ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಸಹಬಾಳ್ವೆ ಸಮಾವೇಶದ ಪ್ರಯುಕ್ತ ಹಮ್ಮಿಕೊಂಡ ಸಾಮರಸ್ಯದ ನಡಿಗೆಗೆ ಶನಿವಾರದಂದು ಉಡುಪಿ ನಗರದ ಹುತಾತ್ಮರ ಸ್ಮಾರಕದ ಬಳಿ ಚಾಲನೆ ನೀಡಲಾಯಿತು.
ಅಜ್ಜರಕಾಡಿನ ಹುತಾತ್ಮ ಸ್ಮಾರಕ ಚೌಕದ ಬಳಿ ಸಾಮರಸ್ಯದ ನಡಿಗೆಗೆ ದಸಂಸ ಮುಖಂಡರಾದ ಮಾವಳ್ಳಿ ಶಂಕರ್, ಆರ್.ಮೋಹನ್‌ರಾಜ್, ಮಾನವ ಹಕ್ಕುಗಳ ಹೋರಾಟಗಾರ ಯೋಗೇಂದ್ರ ಯಾದವ್, ರೈತ ಮುಖಂಡ ರಾದ ಎಚ್.ಆರ್.ಬಸವರಾಜಪ್ಪ, ಚಾಮರಸ ಮಾಲಿ ಪಾಟೀಲ್, ಮಹಿಳಾ ಹಕ್ಕು ಹೋರಾಟಗಾರ್ತಿ ಕೆ.ನೀಲಾ, ಯುವ ಹೋರಾಟಗಾರರಾದ ಸಬೀಹ ಫಾತಿಮ ಹಾಗೂ ನಜ್ಮಾ ಚಿಕ್ಕನೇರಳೆ, ಯೂಸುಫ್ ಕನ್ನಿ, ಫಾದರ್ ವಿಲಿಯಂ ಮಾರ್ಟಿಸ್ ಏಳು ಬಣ್ಣದ ಪತಾಕೆಯನ್ನು ಬೀಸುವ ಮೂಲಕ ಚಾಲನೆ ನೀಡಿದರು.
ಹುತಾತ್ಮ ಚೌಕದಿಂದ ಹೊರಟ ನಡಿಗೆ, ಜೋಡುಕಟ್ಟೆ, ಕೋರ್ಟ್ ರೋಡ್, ಹಳೆ ಡಯಾನ ವೃತ್ತ, ತ್ರಿವೇಣಿ ಸರ್ಕಲ್, ಕ್ಲಾಕ್ ಟವರ್, ಕಿದಿಯೂರು ಹೊಟೇಲ್, ಸಿಟಿ ಬಸ್ ನಿಲ್ದಾಣ ರಸ್ತೆ, ಸರ್ವಿಸ್ ಬಸ್ ನಿಲ್ದಾಣದ ಪಕ್ಕದ ರಸ್ತೆ, ಕ್ಲಾಕ್ ಟವರ್ ಎಡ ರಸ್ತೆ, ತ್ರಿವೇಣಿ ಸರ್ಕಲ್, ಡಯಾನ ಸರ್ಕಲ್, ಹಳೆ ತಾಲೂಕು ಕಚೇರಿ ವೃತ್ತ, ಮಿಷನ್ ಆಸ್ಪತ್ರೆ ಮಾರ್ಗವಾಗಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಮುಕ್ತಾಯಗೊಂಡಿತು.
ಸಾಮರಸ್ಯದ ನಡಿಗೆಯಲ್ಲಿ ಕಂಬಳದ ಕೋಣ, ಹುಲಿವೇಷ, ಚೆಂಡೆ, ನಾಸಿಕ್ ಬ್ಯಾಂಡ್, ಕಂಗೀಲು ನೃತ್ಯ, ಡೊಳ್ಳು ಕುಣಿತ, ಧಪ್ ಮುಂತಾದ ಜನಪದ ನೃತ್ಯಗಳಿದ್ದವು. ನಾಡಿನ ಮಹಾನ್ ವ್ಯಕ್ತಿಗಳಾದ ನಾರಾಯಣ ಗುರುಗಳು, ಡಾ.ಬಿ.ಆರ್.ಅಂಬೇಡ್ಕರ್, ಗಾಂಧೀಜಿ, ಸ್ವಾಮಿ ವಿವೇಕಾನಂದ, ಮದರ್ ತೆರೇಸಾ, ಹಾಜಿ ಅಬ್ದುಲ್ಲಾ, ಮಾಧವ ಮಂಗಲ, ಡಾ.ಟಿಎಂಎ ಪೈ, ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಸ್ತಬ್ದ ಚಿತ್ರಗಳು ಬಹುತ್ವ ಭಾರತವನ್ನು ಪ್ರತಿಬಿಂಬಿಸುತ್ತಿದ್ದವು. ಕರ್ನಾಟಕ ಕರಾವಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾತಂಡಗಳು, ರಾಷ್ಟ್ರಧ್ವಜ ಹಾಗೂ ಏಳು ಬಣ್ಣದ ಪತಾಕೆ ಹಿಡಿದ ಸಹಸ್ರಾರು ಮಂದಿ ಗಮನ ಸೆಳೆದರು.