ನವದೆಹಲಿ: ತೆಲುಗು ಸೂಪರ್ಸ್ಟಾರ್ ಮಹೇಶ್ ಬಾಬು, ತಮ್ಮ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ‘ಮೇಜರ್’ ಚಿತ್ರದ ಟ್ರೇಲರ್ ಲಾಂಚ್ನಲ್ಲಿ ‘ಬಾಲಿವುಡ್ಗೆ ನನ್ನನ್ನು ಅಫೋರ್ಡ್ ಮಾಡಲು ಸಾಧ್ಯವಿಲ್ಲ, ನನ್ನ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ’ ಎಂದು ಹೇಳಿದ್ದಾರೆ.
ಹಿಂದಿ ಚಿತ್ರರಂಗದಿಂದ ಹಲವಾರು ಆಫರ್ ಗಳು ಬರುತ್ತಿದ್ದರೂ ತಾನದನ್ನು ತಿರಸ್ಕರಿಸುತ್ತಿದ್ದೇನೆ ಎಂದ ಬಾಬು, ತೆಲುಗು ನಟನಾಗಿ ತಾನು ಅನುಭವಿಸುವ ಸ್ಟಾರ್ಡಮ್ ಮತ್ತು ಪ್ರೀತಿ ಅಪಾರವಾಗಿರುವುದರಿಂದ ಇತರ ಚಲನಚಿತ್ರೋದ್ಯಮಗಳಲ್ಲಿ ಸಾಹಸ ಮಾಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡಿದ್ದಾರೆ. “ನನಗೆ ಇತರ ಚಿತ್ರರಂಗದಲ್ಲಿ ಕೆಲಸ ಮಾಡುವ ಮನಸ್ಸಿಲ್ಲ, ಏಕೆಂದರೆ ನಾನು ತೆಲುಗು ಸಿನಿಮಾಗಳನ್ನು ಮಾಡುವುದರಲ್ಲಿಯೆ ಸಂತೋಷ ಹೊಂದಿದ್ದೇನೆ. ನಾನು ಯಾವತ್ತೂ ತೆಲುಗು ಸಿನಿಮಾಗಳನ್ನೇ ಮಾ್ಡಬೇಕೆಂದು ಬಯಸಿದ್ದೆ ಮತ್ತು ತೆಲುಗು ಸಿನಿಮಾಗಳನ್ನು ದೇಶದ ಜನರೆಲ್ಲರೂ ನೋಡಬೇಕೆಂದು ಆಸೆ ಪಡುತ್ತಿದ್ದೆ. ಈಗ ನನ್ನ ಆಸೆ ಕೈಗೂಡಿದೆ, ಇದಕ್ಕಿಂತ ಖುಷಿಯಾಗಿರಲು ಸಾಧ್ಯವಿಲ್ಲ. ನನ್ನ ಶಕ್ತಿ ತೆಲುಗು ಚಿತ್ರಗಳು ಎಂಬ ಬಲವಾದ ಅಭಿಪ್ರಾಯ ನನಗೆ ಯಾವಾಗಲೂ ಇತ್ತು, ಮತ್ತು ನಾನು ಅರ್ಥಮಾಡಿಕೊಂಡ ಭಾವನೆಗಳು ತೆಲುಗು ಚಲನಚಿತ್ರ ಭಾವನೆಗಳಾಗಿವೆ” ಎಂದು ಹೇಳಿದ್ದಾರೆ.
ಮೇ 12 ರಂದು ಬಿಡುಗಡೆಯಾಗಲಿರುವ ‘ಸರ್ಕಾರು ವಾರಿ ಪಾಟ’ ಚಿತ್ರದಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಲಿದ್ದಾರೆ. ಪರಶುರಾಮ್ ನಿರ್ದೇಶನದ ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಕೂಡ ನಟಿಸಿದ್ದಾರೆ. ಇದೊಂದು ಮಾಸ್-ಎಂಟರ್ಟೈನರ್ ಎಂದು ಹೇಳಲಾಗಿದೆ.