ಪೆರ್ಡೂರು: 9 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪೆರ್ಡೂರು ಗ್ರಾಮದ ಪಕ್ಕಾಲು ಜಯಲಕ್ಷ್ಮೀ ಮನೆ ನಿವಾಸಿ 30 ವರ್ಷದ ನಾಗರಾಜ ಆಚಾರ್ಯ ಎಂಬವರ ಮೃತದೇಹವು ಅಸ್ಥಿಪಂಜರದ ಸ್ಥಿತಿಯಲ್ಲಿ ಮನೆಯ ಸಮೀಪದ ಚೌಂಡಿ ನಗರದ ಕೇಶವ ಹೆಗ್ಡೆ ಅವರ ಹಾಡಿಯಲ್ಲಿ ಮೇ.7ರಂದು ಸಂಜೆ ಪತ್ತೆಯಾಗಿದೆ.
ನಾಗರಾಜ ಆಚಾರ್ಯ 2021ರ ಆಗಸ್ಟ್ 11ರ ಬೆಳಿಗ್ಗೆ 8.30ರಿಂದ ಮನೆಯಿಂದ ಕಾಣೆಯಾಗಿದ್ದರು. ಮನೆಯವರು ಸಾಕಷ್ಟು ಹುಡುಕಾಡಿದರೂ ನಾಗರಾಜ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಹಿರಿಯಡಕ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು. ನಿನ್ನೆ ಸಂಜೆ ಮೃತನ ಸಹೋದರ ಯುವರಾಜ ಆಚಾರಿ ಎಂಬವರಿಗೆ ಸ್ನೇಹಿತ ಉಮೇಶ್ ಶೆಟ್ಟಿ ಕರೆ ಮಾಡಿ ಕೇಶವ ಹೆಗ್ಡೆ ಹಾಡಿಯಲ್ಲಿ ತಲೆ ಬುರುಡೆ, ಎಲುಬುಗಳು, ಕಪ್ಪು ಬಣ್ಣದ ಪ್ಯಾಂಟ್ ಮತ್ತು 2 ಖಾಲಿ ಪ್ಲಾಸ್ಟಿಕ್ ಬಾಟಲಿ ಪತ್ತೆಯಾಗಿದೆ ಎಂದು ತಿಳಿಸಿದ್ದು, ಅದರಂತೆ ಪಿರ್ಯಾದಿದಾರ ಯುವರಾಜ ಅಲ್ಲಿಗೆ ಹೋಗಿ ನೋಡಿದಾಗ ಕಾಣೆಯಾದ ಅಣ್ಣ ನಾಗರಾಜ ಧರಿಸಿದ ಬಟ್ಟೆ ಹಾಗೂ ಚಪ್ಪಲಿ ಪತ್ತೆಯಾಗಿದ್ದು, ಇದು ಅಣ್ಣನ ಮೃತದೇಹ ಎಂದು ಗುರುತಿಸಿದ್ದಾರೆ.
ನಾಗರಾಜ ಮನೆಯಿಂದ ಕಾಣೆಯಾದ ಬಳಿಕ ಮನೆ ಸಮೀಪದ ಹಾಡಿಗೆ ಹೋಗಿ ನೇಣು ಬಿಗಿದುಕೊಂಡು ಅಥವಾ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಆದರೆ, ಸಹೋದರ ಯುವರಾಜ ಅಣ್ಣನ ಸಾವಿನಲ್ಲಿ ಸಂಶಯ ಇದೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.