ಉಡುಪಿ: ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿನ ರೈತರಿಗೆ, ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ವಿವಿಧ ಹೊಸ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತೀವ್ರ ತೊಡಕಾಗಿದ್ದ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಸರ್ಕಾರವು ಪ್ರಸ್ತುತ ಬಗೆಹರಿಸಿದ್ದು, 6.60 ಲಕ್ಷ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಹೊರತುಪಡಿಸಿ, ಸರ್ಕಾರಿ ಆದೇಶ ಹೊರಡಿಸಿದೆ ಎಂದು ರಾಜ್ಯದ ಅರಣ್ಯ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ಹೇಳಿದರು.
ಅವರು ಬ್ರಹ್ಮಾವರದ ನೀಲಾವರದಲ್ಲಿ ಅರಣ್ಯ ಇಲಾಖೆ ಹಾಗೂ ಶ್ರೀ ಪೇಜಾವರ ಮಠದ ಸಹಯೋಗದಲ್ಲಿ, ಉಡುಪಿ ಶ್ರೀ ಪೇಜಾವರ ಮಠದ ವಿಶ್ವೇಶ್ವತೀರ್ಥ ಶ್ರೀಪಾದರ ಗೌರವಾರ್ಥ ನಿರ್ಮಿಸಲಾಗುವ ಸ್ಮೃತಿವನ ನಿರ್ಮಾಣ ಕಾರ್ಯದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
1996 ರ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ, ರಾಜ್ಯದಲ್ಲಿ ತಜ್ಞರ ಸಮಿತಿಯ ಮೂಲಕ 9,94,881.11 ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಿದ್ದು, ಸದ್ರಿ ತಜ್ಞರ ವರದಿಯಲ್ಲಿ ಶಾಸನಬದ್ಧ ಅರಣ್ಯಗಳನ್ನು ಡೀಮ್ಡ್ ಅರಣ್ಯಗಳೆಂದು ತಪ್ಪಾಗಿ ವರ್ಗಿಕರಿಸಲಾಗಿದೆ. ಯಾವುದೇ ಪೂರ್ವ ನಿರ್ಧಾರಿತ ಮಾನದಂಡಗಳನ್ನು ಅಳವಡಿಸದೆ ಇದನ್ನು ಗುರುತಿಸುವುದರಿಂದ ಈ ಪ್ರದೇಶಗಳನ್ನು ಮರು ಪರಿಶೀಲಿಸಲು ನಿರ್ಧರಿಸಿ ಕಂದಾಯ ಮತ್ತು ಅರಣ್ಯಾಧಿಕಾರಿಗಳನ್ನು ಒಳಗೊಂಡ ಜಿಲ್ಲಾ ವಿಬಾಗೀಯ ಮತ್ತು ರಾಜ್ಯಮಟ್ಟದ
ಸಮಿತಿಗಳನ್ನು ರಚಿಸಲಾಗಿತ್ತು.
ಈ ಸಮಿತಿಗಳ ತಜ್ಞರ ವರದಿಯು ಈ ಹಿಂದೆ ಗುರುತಿಸಿರುವ 9,94,881.11 ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಪ್ರದೇಶದಲ್ಲಿ ನಿರ್ದಿಷ್ಟಪಡಿಸಿರುವ ಮಾನದಂಡಗಳನ್ವಯ ಅರಣ್ಯ ಗುಣಲಕ್ಷಣಗಳನ್ನು ಹೊಂದಿಲ್ಲದ ಮತ್ತು 2 ಹೆಕ್ಟೇರ್ ಪ್ರದೇಶಗಳಿಗಿಂತ ಕಡಿಮೆ ಇರುವ ಪ್ರದೇಶಗಳನ್ನು ಅಸ್ತಿತ್ವದಲ್ಲಿರದ ಸರ್ವೇ ನಂಬರ್ಗಳು, ಮೀಸಲು ಅರಣ್ಯ ಪ್ರದೇಶ, ಕೆರೆ ತೀರ, ಸಾಂಸ್ಥಿಕ, ಶಾಲಾ ನೆಡುತೋಪು, ಸ್ಟ್ರಿಪ್ಪ್-ಕಾಲುವೆ ನೆಡುತೋಪು
ಮತ್ತು ರಸ್ತೆ ಬದಿ ನೆಡುತೋಪು, ಪ್ರತಿ ಹೆಕ್ಟೇರಿಗೆ 50 ಕ್ಕಿಂತ ಕಡಿಮೆ ಮರಗಳಿರುವ, ಇತರೆ ವಿಭಾಗಗಳಿಗೆ/ಇಲಾಖೆಗಳಿಗೆ ವರ್ಗಾಯಿಸಲಾದ ಪ್ರದೇಶಗಳು, ವಿವಿಧ ಶಾಸನಬದ್ಧ ನಿಬಂಧನೆಗಳ ಪ್ರಕಾರ ಅರಣ್ಯ ಮತ್ತು ನಿರ್ದಿಷ್ಟಪಡಿಸಿದ ಕ್ಷೇತ್ರದ ಮಾನದಂಡಗಳಿಗೆ ಅನುಗುಣವಾಗಿರದ ಪ್ರದೇಶಗಳನ್ನು ಪ್ರತ್ಯೇಕಿಸಿ 3,30,186.96 ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಿ ವಿವರಗಳನ್ನು ಸಲ್ಲಿಸಿದ್ದು, ಅದರಂತೆ ಈ ಪ್ರದೇಶವನ್ನು ಸಂರಕ್ಷಿಸಿ ಅಭಿವೃದ್ಧಿಗೊಳಿಸುವ ದೃಷ್ಠಿಯಿಂದ ಅಧಿಸೂಚನೆ ಹೊರಡಿಸಿದ್ದು, ಅದರ ಆದೇಶದ ಪ್ರತಿಯನ್ನು ಸಚಿವರು ಬಿಡುಗಡೆಗೊಳಿಸಿದರು.
ಪ್ರಸ್ತುತ ಡೀಮ್ಡ್ ಅರಣ್ಯ ವ್ಯಾಪ್ತಿಯ 3.30 ಲಕ್ಷ ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆ ವತಿಯಿಂದ ಸಂರಕ್ಷಿಸಿ ಅಭಿವೃದ್ಧಿಗೊಳಿಸಲು ಸಚಿವ ಸಂಪುಟದ ಅನುಮೋದನೆಯೊಂದಿಗೆ ಸರ್ವೋಚ್ಛ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದು, ಡೀಮ್ಡ್ ಅರಣ್ಯ ವ್ಯಾಪ್ತಿಯಿಂದ ಹೊರತುಪಡಿಸಿರುವ ಪ್ರದೇಶವನ್ನು ಕಂದಾಯ ಇಲಾಖೆಗೆ ನೀಡಲಾಗುತ್ತಿದ್ದು, ಈ ಪ್ರದೇಶವನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಲಾಗುವುದು ಎಂದರು.