ಉಡುಪಿ: ವ್ಯವಹಾರಕ್ಕೆ ನೀಡಿರುವ ಸಾಲವನ್ನು ವಾಪಸು ಕೇಳಿದ್ದಕ್ಕೆ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವ ಘಟನೆ ಉಡುಪಿ ತಾಲೂಕಿನ ಬ್ರಹ್ಮಗಿರಿಯಲ್ಲಿ ನಡೆದಿದೆ.
ಈ ಬಗ್ಗೆ ಬ್ರಹ್ಮಗಿರಿ ನಾಯರ್‌ಕೆರೆ ನಿವಾಸಿ 70 ವರ್ಷದ ಪ್ರೇಮಾನಂದ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಇವವರಿಗೆ ಪರಿಚಯಸ್ಥನಾಗಿದ್ದ ಸ್ಯಾಮುವೆಲ್ ರಿಜೋಯ್ ಆನಂದ ಯಾನೆ ಸ್ಯಾಮುವೆಲ್ ಡಿ’ಸೋಜ ವಂಚನೆ ಎಸಗಿರುವ ಆರೋಪಿ.
ಪ್ರೇಮಾನಂದ ಅವರು 2019ರಲ್ಲಿ ಆರೋಪಿಗೆ ವ್ಯವಹಾರದ ಉದ್ದೇಶಕ್ಕೆ 3.50 ಲಕ್ಷ ರೂ. ಹಣವನ್ನು ಸಾಲದ ರೂಪದಲ್ಲಿ ಕೊಟ್ಟಿದ್ದರು. ಹಣವನ್ನು ವಾಪಸು ನೀಡುವಂತೆ ಕೇಳಿದ್ದಕ್ಕೆ 2022 ರ ಜನವರಿ 24ರಂದು ಆರೋಪಿ ಸ್ಯಾಮುವೆಲ್, ಬ್ಯಾಂಕ್ ಆಫ್ ಬರೋಡ ಕೊರಂಗ್ರಪಾಡಿಯ ಶಾಖೆಯ ಚೆಕ್ ಅನ್ನು ನೀಡಿದ್ದನು. ಆದರೆ ಆ ಚೆಕ್ ಬೌನ್ಸ್ ಆಗಿತ್ತು. ಬಳಿಕ ಮತ್ತೆ ಆರೋಪಿಯನ್ನು ವಿಚಾರಿಸಿದಾಗ ಆತ ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ ಹಣ ಕೇಳಿದಲ್ಲಿ ಕೊಂದು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪ್ರೇಮಾನಂದ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.