ಶಂಕರಾಚಾರ್ಯರ ತತ್ವಗಳು ಐಕ್ಯತೆ ಮೂಡಿಸುವಲ್ಲಿ ಸಹಕಾರಿ: ಅಪರ ಜಿಲ್ಲಾಧಿಕಾರಿ ವೀಣಾ

ಉಡುಪಿ: ಸನಾತನ ಹಿಂದೂ ಧರ್ಮದ ಉಳಿವು ಮತ್ತು ಬೆಳವಣಿಗೆಗೆ ಶಂಕರಾಚಾರ್ಯರು ನೀಡಿರುವ ಕೊಡುಗೆ ಅಪಾರವಾದುದು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾರ್ವಜನಿಕರಲ್ಲಿ ಭಕ್ತಿಯ ಭಾವನೆ ತುಂಬುವುದರ ಮೂಲಕ ಹಾಗೂ ದೇವಾಲಯಗಳ ಸ್ಥಾಪನೆ ಮೂಲಕ ಹಿಂದೂ ಧರ್ಮದ ಬೆಳವಣಿಗೆಗೆ ಕೊಡುಗೆ ನೀಡಿದ್ದ ಶಂಕರಾಚಾರ್ಯರು, ದೇಶದಾದ್ಯಂತ ಸ್ಥಾಪಿಸಿದ 4 ಪೀಠಗಳ ಮೂಲಕ ಸಮಾಜದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದ್ದಾರೆ. ಧರ್ಮದ ಉಳಿವಿಗೆ ಶ್ರಮಿಸಿದ ಎಲ್ಲಾ ಸಮಾಜ ಸುಧಾರಕರು, ಜನರಲ್ಲಿದ್ದ ಮೂಢ ನಂಬಿಕೆಗಳನ್ನು ತೊಡೆದು ಹಾಕಿ, ವೈಚಾರಿಕತೆಯನ್ನು ಮೂಡಿಸಿ, ಪ್ರಜ್ಞಾವಂತರನ್ನಾಗಿ ಮಾಡಿದ್ದು, ಶಂಕರಾಚಾರ್ಯರ ತತ್ವಗಳು ಐಕ್ಯತೆ ಮೂಡಿಸುವಲ್ಲಿ ಸಹಕಾರಿಯಾಗಿವೆ
ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಕಿರಣ್ ಮಂಜನಬೈಲು ಮಾತನಾಡಿ, ಭಕ್ತಿ ಸಿದ್ಧಾಂತದ ಪ್ರತಿಪಾದನೆ ಮಾಡಿದ ಶಂಕರಾಚಾರ್ಯರು, ಆತ್ಮ ಪರಮಾತ್ಮನ ಬೇಧವಿಲ್ಲದೇ ಪ್ರತಿಯೊಬ್ಬರೂ ಮೋಕ್ಷ ಪಡೆಯಲು ಅವಕಾಶವಿದ್ದು, ದೇವರು ಒಬ್ಬನೇ ಎಂದು ಸಾರಿದ್ದರು. ಭಕ್ತಿಯಿಂದ ಕರ್ತವ್ಯ ನಿರ್ವಹಿಸಿ, ಐಕ್ಯಮತದಿಂದ ಇರಬೇಕೆಂದು ಭೋದಿಸಿದ್ದ ಅವರ ಸಂದೇಶಗಳು ಒಂದು ಸಮುದಾಯಕ್ಕೆ ಮಾತ್ರ
ಸೀಮಿತವಾಗಿರಲಿಲ್ಲ. ಎಲ್ಲಾ ಸಮುದಾಯದ ಅನುಯಾಯಿಗಳನ್ನೂ ಹೊಂದಿದ್ದು, ಹಿಂದೂ ಧರ್ಮದ ಪುನರುತ್ಥಾನಕ್ಕೆ ಅವಿರತ ಶ್ರಮಿಸಿದ್ದ ಶಂಕರಚಾರ್ಯರು ಜಗದ್ಗುರು ಎಂದು ಪ್ರಖ್ಯಾತರಾಗಿದ್ದು, ಅವರ ಜನ್ಮದಿನವನ್ನು ತತ್ವಜ್ಞಾನಿಗಳ ದಿನ ಎಂದು ಘೋಷಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ತಹಶೀಲ್ದಾರ್ ಅರ್ಚನಾ ಭಟ್, ವಿವಿಧ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು, ನಿರೂಪಿಸಿ, ವಂದಿಸಿದರು.